ಕೆಕೆಆರ್‌ಗೆ ‘ಮಾಡು– ಮಡಿ’ ಪಂದ್ಯ ಚೆನ್ನೈ (ಪಿಟಿಐ): ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದವರು ಭಾನುವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂ‍ಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. 12 ಪಂದ್ಯಗಳಿಂದ 15 ಪಾಯಿಂಟ್ಸ್‌ ಹೊಂದಿರುವ ಮಹೇಂದ್ರ ಸಿಂಗ್‌ ಧೋನಿ ಬಳಗ ಈ ಪಂದ್ಯದಲ್ಲಿ ಗೆದ್ದರೆ ‘ಪ್ಲೇ ಆಫ್‌’ನಲ್ಲಿ ಸ್ಥಾನ ಖಚಿತವಾಗಲಿದೆ. 12 ಪಂದ್ಯಗಳನ್ನು ಆಡಿರುವ ಕೋಲ್ಕತ್ತದ ತಂಡ 10 ಪಾಯಿಂಟ್ಸ್‌ ಮಾತ್ರ ಹೊಂದಿದೆ. ‘ಪ್ಲೇ ಆಫ್‌’ ಪ್ರವೇಶಿಸಬೇಕಾದರೆ ಇನ್ನುಳಿದ ಎರಡು ಪಂದ್ಯಗಳನ್ನು ಗೆಲ್ಲುವ ಜತೆ ಇತರ ಪಂದ್ಯಗಳ ಫಲಿತಾಂಶವನ್ನೂ ಅವಲಂಬಿಸಬೇಕಿದೆ. ಚೆನ್ನೈ ತಂಡ ಸತತ ಎರಡು ಪಂದ್ಯಗಳನ್ನು ಗೆದ್ದ ಆತ್ಮವಿಶ್ವಾಸದಲ್ಲಿದೆ. ಡೆವೊನ್‌ ಕಾನ್ವೆ, ಋತುರಾಜ್‌ ಗಾಯಕವಾಡ್‌, ಅಜಿಂಕ್ಯ ರಹಾನೆ ಮತ್ತು ಶಿವಂ ದುಬೆ ಅವರು ಬ್ಯಾಟಿಂಗ್‌ನಲ್ಲಿ ತಂಡದ ಬಲ ಎನಿಸಿಕೊಂಡಿದ್ದಾರೆ. ಕಾನ್ವೆ ಅವರು ಒಟ್ಟು 420 ರನ್‌ ಪೇರಿಸಿದ್ದಾರೆ. ಚೆನ್ನೈ ತಂಡದ ಯಶಸ್ಸಿನಲ್ಲಿ ಬೌಲರ್‌ಗಳೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಥೀಶ ಪಥಿರಾಣ ಮತ್ತು ತುಷಾರ್‌ ದೇಶಪಾಂಡೆ ಅವರು ಶಿಸ್ತಿನ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ. ತುಷಾರ್‌ ಅವರು ಹೆಚ್ಚು ರನ್‌ಗಳನ್ನು ಬಿಟ್ಟುಕೊಡುತ್ತಿದ್ದರೂ, ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪಿನ್ನರ್‌ಗಳಾದ ಮೊಯೀನ್‌ ಅಲಿ, ರವೀಂದ್ರ ಜಡೇಜ ಮತ್ತು ಮಹೀಶ ತೀಕ್ಷಣ ಅವರೂ ತಂಡದ ಗೆಲುವಿಗೆ ಕೊಡುಗೆ ನೀಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಇರುವ ಪರಿಣಾಮಕಾರಿ ಬೌಲಿಂಗ್‌ ನಡೆಸಿದ್ದರು. ಕೆಕೆಆರ್‌ ಕೂಡಾ ಪ್ರಭಾವಿ ಸ್ಪಿನ್ನರ್‌ಗಳನ್ನು ಹೊಂದಿದ್ದು, ಅಚ್ಚರಿಯ ಗೆಲುವಿನ ನಿರೀಕ್ಷೆಯಲ್ಲಿದೆ. ವರುಣ್‌ ಚಕ್ರವರ್ತಿ ಮತ್ತು ಸುಯಶ್ ಶರ್ಮಾ ಅವರ ಪ್ರದರ್ಶನವು ಈ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ತಂಡದ ಇನ್ನೊಬ್ಬ ಸ್ಪಿನ್ನರ್‌ ಸುನಿಲ್‌ ನಾರಾಯಣ ಈ ಟೂರ್ನಿಯಲ್ಲಿ ಇನ್ನೂ ಗಮನ ಸೆಳೆದಿಲ್ಲ. ಬ್ಯಾಟಿಂಗ್‌ನಲ್ಲಿ ನಾಯಕ ನಿತೀಶ್‌ ರಾಣಾ ಹಾಗೂ ವೆಂಕಟೇಶ್ ಅಯ್ಯರ್‌ ಅವರನ್ನು ಹೊರತುಪಡಿಸಿದರೆ, ಇತರರು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿಲ್ಲ. ಆ್ಯಂಡ್ರೆ ರಸೆಲ್‌ ಮತ್ತು ರಿಂಕು ಸಿಂಗ್‌ ಅವರಿಂದ ಸ್ಫೋಟಕ ಆಟ ಮೂಡಿಬರಬೇಕಿದೆ. ಕೋಲ್ಕತ್ತ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಎದುರು 9 ವಿಕೆಟ್‌ಗಳಿಂದ ಸೋತಿತ್ತು. ಪಂದ್ಯ ಆರಂಭ: ರಾತ್ರಿ 7.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.