2023: ಪ್ಲೇ ಆಫ್‌ ಮೇಲೆ ಚೆನ್ನೈ ಕಣ್ಣು ಚೆನ್ನೈ(ಪಿಟಿಐ): ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಬುಧವಾರ ತನ್ನ ತವರಿನಂಗಳದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ ಸೆಣಸಲಿದೆ. ಚೆನ್ನೈ ತಂಡವು ಅಂಕಪಟ್ಟಿಯಲ್ಲಿ 13 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೂ ಮೈಮರೆಯುವಂತಿಲ್ಲ. ಚೆನ್ನೈ ತಂಡವು ಇನ್ನುಳಿದಿರುವ ತನ್ನ ಪಾಲಿನ ಮೂರು ಪಂದ್ಯಗಳಲ್ಲಿ ಎರಡು ಬಾರಿ ಡೆಲ್ಲಿಯನ್ನು ಎದುರಿಸಲಿದೆ. ಇದೇ 20ರಂದು ದೆಹಲಿಯಲ್ಲಿ ನಡೆಯುವ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಇನ್ನೊಂದು ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಚೆನ್ನೈ ಆಡುವುದು. ಡೆಲ್ಲಿ ತಂಡವು ಪ್ಲೇ ಆಫ್ ಪ್ರವೇಶಿಸುವ ಹಾದಿ ಬಹುತೇಕ ಮುಚ್ಚಿದೆ. ಆದರೆ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈಚೆಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರಿಗೆ ಆಘಾತ ನೀಡಿತ್ತು. ಇದರಿಂದಾಗಿ ಧೋನಿ ಬಳಗವು ಡೇವಿಡ್ ವಾರ್ನರ್ ಪಡೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ತನ್ನ ಜಯದ ಲಯವನ್ನು ಮುಂದುವರಿಸುವ ಅಗತ್ಯವಿದೆ. ಚೆನ್ನೈ ತಂಡವು ತನ್ನ ಈಚಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಜಯಿಸಿತ್ತು. ಬೌಲಿಂಗ್ ವಿಭಾಗದ ಲೋಪವು ಸುಧಾರಣೆಯಾಗಿರುವ ಅಂಶವು ಆ ಪಂದ್ಯದಲ್ಲಿ ಎದ್ದುಕಂಡಿತ್ತು. ಮಥೀಷ್ ಪಥಿರಾಣಾ, ತುಷಾರ್ ದೇಶಪಾಂಡೆ, ದೀಪಕ್ ಚಾಹರ್ ಹಾಗೂ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಚೆನ್ನೈ ಬೌಲಿಂಗ್ ಪಡೆಗೆ ಡೆಲ್ಲಿ ತಂಡದ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್, ವಾರ್ನರ್, ಮಿಚೆಲ್ ಮಾರ್ಷ್ ಮತ್ತು ರಿಲಿ ರುಸೋ ಅವರು ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ. ಡೆಲ್ಲಿ ತಂಡದ ಬೌಲರ್‌ಗಳಾದ ಇಶಾಂತ್ ಶರ್ಮಾ, ಮುಕೇಶ್ ಕುಮಾರ್ ಹಾಗೂ ಕುಲದೀಪ್ ಯಾದವ್ ಅವರಿಗೆ ಚೆನ್ನೈ ಬ್ಯಾಟರ್‌ಗಳನ್ನು ಕಟ್ಟಿಹಾಕುವುದು ಕಠಿಣ ಸವಾಲಾಗಬಹುದು. ಏಕೆಂದರೆ, ಡೆವೊನ್ ಕಾನ್ವೆ (457 ರನ್) ಮತ್ತು ಋತುರಾಜ್ ಗಾಯಕವಾಡ (292 ರನ್) ಜೋಡಿಯು ಬಹುತೇಕ ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ಆರಂಭ ನೀಡಿದೆ. ಅನುಭವಿ ಅಜಿಂಕ್ಯ ರಹಾನೆ (245 ರನ್) ಹಾಗೂ ಶಿವಂ ದುಬೆ (290 ರನ್) ಉತ್ತಮ ಲಯದಲ್ಲಿರುವುದರಿಂದ ಮಧ್ಯಮ ಕ್ರಮಾಂಕವೂ ಬಲಿಷ್ಠವಾಗಿದೆ. ಕೊನೆಯ ಹಂತದ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೆ ನಾಯಕ ಧೋನಿ ಸಿಕ್ಸರ್‌ ಸಿಡಿಸಬಲ್ಲರು. ಆದರೆ ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ರನ್ ಗಳಿಸಬೇಕಿದೆ. ಅವರೂ ಲಯಕ್ಕೆ ಬಂದರೆ ತಂಡ ಮತ್ತಷ್ಟು ಬಲಿಷ್ಠವಾಗುವುದರಲ್ಲಿ ಸಂದೇಹವಿಲ್ಲ. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನೆಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.