| ಪ್ಲೇ ಆಫ್‌ನತ್ತ ಚಿತ್ತ; ಎದುರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ ಮುಂಬೈ: ಈ ಬಾರಿಯ ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ‘ಪ್ಲೇ ಆಫ್‌’ ಸ್ಥಾನ ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಇಂದು ಮುಂಬೈ ಇಂಡಿಯನ್ಸ್‌ ವಿರುದ್ಧ ಕಣಕ್ಕಿಳಿದಿದೆ. ಟಾಸ್‌ ಗೆದ್ದಿರುವ ಮುಂಬೈ ತಂಡದ ನಾಯಕ ರೋಹಿತ್‌ ಶರ್ಮಾ ಬೌಲಿಂಗ್‌ ಆಯ್ದುಕೊಂಡಿದ್ದಾರೆ. ಉಭಯ ತಂಡಗಳು 10 ಪಂದ್ಯಗಳನ್ನು ಆಡಿವೆ. ತಲಾ 5 ಜಯ ಹಾಗೂ 5 ಸೋಲಿನೊಂದಿಗೆ 10 ಪಾಯಿಂಟ್ಸ್‌ಗಳನ್ನು ಕಲೆಹಾಕಿವೆ. ಉತ್ತಮ ರನ್‌ರೇಟ್‌ ಆಧಾರದಲ್ಲಿ ಫಫ್‌ ಡುಪ್ಲೆಸಿ ನಾಯಕತ್ವದ ಆರ್‌ಸಿಬಿ ಬಳಗ, ರೋಹಿತ್‌ ಶರ್ಮಾ ಬಳಗಕ್ಕಿಂತ ಒಂದು ಸ್ಥಾನ ಮೇಲಿದೆ. ಪ್ಲೇ ಆಫ್‌ ಪ್ರವೇಶದ ಹಾದಿಯಲ್ಲಿ ಎರಡೂ ತಂಡಗಳಿಗೆ ಉಳಿದಿರುವ ನಾಲ್ಕು ಪಂದ್ಯಗಳ ಫಲಿತಾಂಶವೂ ಮಹತ್ವದ್ದಾಗಿವೆ. ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಆಘಾತ ಅನುಭವಿಸಿದ್ದರೆ, ಮುಂಬೈ ತಂಡ, ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಮುಗ್ಗರಿಸಿತ್ತು. ಸೋಲಿನ ನಿರಾಸೆಯನ್ನು ಮರೆತು ಸಂಘಟಿತ ಪ್ರದರ್ಶನ ನೀಡುವುದು ಎರಡೂ ತಂಡಗಳ ಗುರಿ. ಬೆಂಗಳೂರಿನ ತಂಡವು ಈ ಪಂದ್ಯದಲ್ಲೂ ಅಗ್ರ ಕ್ರಮಾಂಕದ ಬ್ಯಾಟರ್‌ ಗಳಾದ ಡುಪ್ಲೆಸಿ, ವಿರಾಟ್‌ ಕೊಹ್ಲಿ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೇಲೆ ಭರವಸೆ ಇಟ್ಟಿದೆ. ಈ ಮೂವರು ಜತೆಯಾಗಿ ಮಿಂಚಿದಾಗ ತಂಡಕ್ಕೆ ಗೆಲುವು ದಕ್ಕಿದೆ. ಏಪ್ರಿಲ್‌ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇವೆರಡು ತಂಡಗಳು ಎದುರಾಗಿದ್ದಾಗ ಆರ್‌ಸಿಬಿ ಎಂಟು ವಿಕೆಟ್‌ಗಳಿಂದ ಗೆದ್ದಿತ್ತು. ಆ ಸೋಲಿಗೆ ಮುಯ್ಯಿ ತೀರಿಸುವ ಲೆಕ್ಕಾಚಾರದೊಂದಿಗೆ ಮುಂಬೈ ಇಂಡಿಯನ್ಸ್‌ ಕಣಕ್ಕಿಳಿಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.