ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್‌ಗೆ ವೀಂಪಿ ಮಹಾರ್ಡಿ ಕೋಚ್ ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರಿಗೆ ತರಬೇತಿ ನೀಡಲು ಇಂಡೋನೆಷ್ಯಾದ ಕೋಚ್‌ ನೇಮಕವಾಗಿದ್ದಾರೆ. 2024ರ ಮೇ 1ರಿಂದ ಒಲಿಂಪಿಕ್ ಕೂಟದ ಅರ್ಹತಾ ಸುತ್ತು ಆರಂಭವಾಗಲಿದೆ. ಪ್ರಸ್ತುತ ಶ್ರೀಕಾಂತ್ ಉತ್ತಮ ಲಯದಲ್ಲಿ ಇಲ್ಲ. ಆದ್ದರಿಂದ ತಮ್ಮ ಕೌಶಲಗಳನ್ನು ಸುಧಾರಿಸಿಕೊಳ್ಳುವತ್ತ ಗಮನ ನೆಟ್ಟಿದ್ದಾರೆ. ಅವರಿಗೆ ನೆರವು ನೀಡಲು ವೀಂಪಿ ಮಹಾರ್ಡಿ ನೇಮಕವಾಗಿದ್ದಾರೆ. ’ಡಿಸೆಂಬರ್‌ 2021ರಲ್ಲಿ ಆಗಿನ ನನ್ನ ಕೋಚ್ ಆಗಸ್ ಬಿಟ್ಟ ನಂತರ ನೂತನ ಕೋಚ್‌ ನೇಮಕಕ್ಕಾಗಿ ಪ್ರಯತ್ನಿಸಿದ್ದೆ. ಈಗ ಇಂಡೋನೆಷ್ಯಾ ಮೂಲದ ಕೋಚ್ ವೀಂಪಿ ಸಿಕ್ಕಿದ್ದಾರೆ. ಈ ಹಿಂದೆ ನಾನು ಇಂಡೋನೆಷ್ಯಾದಲ್ಲಿ ನಡೆದ ಮೂರು ವಾರಗಳ ತರಬೇತಿಗೆ ಹೋಗಿದ್ದೆ. ಆಗ ಅವರನ್ನು ಭೇಟಿಯಾಗಿದ್ದೆ. ಹೋದ ತಿಂಗಳು ಅವರು ಭಾರತಕ್ಕೆ ಬಂದಿದ್ದಾರೆ‘ ಎಂದು ಶ್ರೀಕಾಂತ್ ತಿಳಿಸಿದ್ದಾರೆ. ’ಟಾಪ್ಸ್ ಯೋಜನೆಯಡಿಯಲ್ಲಿ ಕೋಚ್ ನೇಮಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಫಲಕಾರಿಯಾಗಲಿಲ್ಲ. ಬಾರತ ಕ್ರೀಡಾ ಪ್ರಾಧಿಕಾರಕ್ಕೆ ಹೋದ ಜನವರಿಯಲ್ಲಿಯೇ ಪ್ರಸ್ತಾವ ಸಲ್ಲಿಸಿದ್ದೆ. ಅದು ಇನ್ನೂ ಕಡತದಲ್ಲಿಯೇ ಇದೆ. ಒಲಿಂಪಿಕ್ ಅರ್ಹತಾ ಸುತ್ತು ಸಮೀಪಿಸುತ್ತಿದೆ. ಆದ್ದರಿಂದ ನನಗೆ ಇನ್ನಷ್ಟು ಕಾಲ ಕಾಯಲು ಸಾಧ್ಯವಿಲ್ಲ. ಆದ್ದರಿಂದ ವೈಯಕ್ತಿಕ ನಿರ್ಧಾರ ತೆಗೆದುಕೊಂಡೆ‘ ಎಂದೂ ಶ್ರೀಕಾಂತ್ ಸ್ಪಷ್ಟಪಡಿಸಿದರು. ಮಹಾರ್ಡಿ ಈ ಹಿಂದೆ ವಿಶ್ವದ ಅಗ್ರ 25 ಆಟಗಾರರಲ್ಲಿ ಒಬ್ಬರಾಗಿದ್ದರು. ಹತ್ತು ವರ್ಷಗಳಿಗೂ ಹೆಚ್ಚಿನ ಸಮಯದಿಂದ ತರಬೇತುದಾರರಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.