2023: ಚಾಹಲ್ ಮೋಡಿ, ಜೈಸ್ವಾಲ್ ಅಬ್ಬರ, ರಾಯಲ್ಸ್‌ಗೆ ಭರ್ಜರಿ ಜಯ ಕೋಲ್ಕತ್ತ: ಯಜುವೇಂದ್ರ ಚಾಹಲ್ ಸ್ಪಿನ್ ಮೋಡಿ ಹಾಗೂ ಶರವೇಗದ ಅರ್ಧಶತಕ ದಾಖಲಿಸಿದ ಯಶಸ್ವಿ ಜೈಸ್ವಾಲ್ ಅಬ್ಬರದ ಆಟದಿಂದ ರಾಜಸ್ಥಾನ ರಾಯಲ್ಸ್ ಜಯಭೇರಿ ಬಾರಿಸಿತು. ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚಾಹಲ್ (25ಕ್ಕೆ4) ಹಾಗೂ ಜೈಸ್ವಾಲ್ (ಅಜೇಯ 98; 47ಎ, 4X13, 6X5) ಅವರ ಆಟದ ಬಲದಿಂದ ರಾಯಲ್ಸ್ ತಂಡವು ಕೋಲ್ಕತ್ತ ನೈಟ್‌ರೈಡರ್ಸ್ ಎದುರು 9 ವಿಕೆಟ್‌ಗಳಿಂದ ಗೆದ್ದಿತು. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಟಾಸ್ ಗೆದ್ದ ರಾಜಸ್ಥಾನ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 149 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು 13.1 ಓವರ್‌ಗಳಲ್ಲಿ 1 ವಿಕೆಟ್‌ಗೆ 151 ರನ್ ಗಳಿಸಿ ಜಯಿಸಿತು. ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೈಸ್ವಾಲ್ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ 26 ರನ್‌ ಸೂರೆ ಮಾಡಿ ತಂಡದ ಗೆಲುವಿಗೆ ಮುನ್ನುಡಿ ಬರೆದರು. ಎರಡನೇ ಓವರ್‌ನಲ್ಲಿ ಜೋಸ್ ಬಟ್ಲರ್ ತಮ್ಮ ಖಾತೆ ತೆರೆಯುವ ಮುನ್ನವೇ ರನ್‌ಔಟ್ ಆಗಿ ಮರಳಿದರು. ಜೈಸ್ವಾಲ್ ಜೊತೆಗೂಡಿದ ನಾಯಕ ಸಂಜು ಸ್ಯಾಮ್ಸನ್ (ಔಟಾಗದೆ 48) ಕೂಡ ಅಬ್ಬರಿಸಿದರು. ಇವರಿಬ್ಬರ ಜೊತೆಯಾಟದಲ್ಲಿ 121 ರನ್‌ಗಳು ಸೇರಿದವು. 13 ಎಸೆತ ಅರ್ಧಶತಕ: ಎಡಗೈ ಬ್ಯಾಟರ್ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ದಾಖಲೆ ಮಾಡಿದರು. ಈ ಹಿಂದೆ ಕೆ.ಎಲ್. ರಾಹುಲ್ (14 ಎಸೆತಗಳು) ಮಾಡಿದ್ದ ದಾಖಲೆಯನ್ನು ಮೀರಿನಿಂತರು. ಟೂರ್ನಿಯಲ್ಲಿ ಜೈಸ್ವಾಲ್ ಈಗಾಗಲೇ ಒಂದು ಶತಕ ಗಳಿಸಿದ್ದಾರೆ. ಇಲ್ಲಿ ಎರಡನೇ ಶತಕ ದಾಖಲಿಸುವ ಅವಕಾಶ ಕೊಂಚ ವ್ಯತ್ಯಾಸದಲ್ಲಿ ಕೈತಪ್ಪಿತು. ಚಾಹಲ್ ಮೋಡಿ: ಕೋಲ್ಕತ್ತ ತಂಡದ ಆರಂಭಿಕ ಬ್ಯಾಟರ್‌ಗಳಾದ ಜೇಸನ್ ರಾಯ್ ಹಾಗೂ ರೆಹಮಾನುಲ್ಲಾ ಗುರ್ಬಾಜ್ ಅವರ ಜೊತೆಯಾಟ ಬೆಳೆಯದಂತೆ ವೇಗಿ ಟ್ರೆಂಟ್ ಬೌಲ್ಟ್ ನೋಡಿಕೊಂಡರು. ಇನಿಂಗ್ಸನ್‌ ಮೂರನೇ ಓವರ್‌ನಲ್ಲಿ ಜೇಸನ್ ಹಾಗೂ ಐದನೇ ಓವರ್‌ನಲ್ಲಿ ಗುರ್ಬಾಜ್ ವಿಕೆಟ್‌ಗಳನ್ನು ಉರುಳಿಸಿದರು. ವೆಂಕಟೇಶ್ ಅಯ್ಯರ್ (57; 42ಎ) ಮತ್ತು ನಾಯಕ ನಿತೀಶ್ ರಾಣಾ (22; 17ಎ) ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು. ಮೂರನೇ ವಿಕೆಟ್‌ಗೆ 48 ರನ್ ಸೇರಿಸಿದರು. ಚಾಹಲ್ ಹಾಕಿದ 11ನೇ ಓವರ್‌ನಲ್ಲಿ ರಾಣಾ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ಅರ್ಧಶತಕ ಗಳಿಸಿದ್ದ ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್ ಅವರಿಬ್ಬರನ್ನೂ 17ನೇ ಓವರ್‌ನಲ್ಲಿ ಔಟ್ ಮಾಡುವಲ್ಲಿ ಚಾಹಲ್ ಯಶಸ್ವಿಯಾದರು. ಒಂದು ಸಿಕ್ಸರ್ ಸಿಡಿಸಿ, ಒಟ್ಟು 16 ರನ್‌ಗಳಿಸಿದ್ದ ರಿಂಕು ಸಿಂಗ್ ಮತ್ತಷ್ಟು ಅಬ್ಬರಿಸುವ ಮುನ್ನವೇ ಚಾಹಲ್ ಬೌಲಿಂಗ್‌ಗೆ ಶರಣಾದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸುವ ಸಾಧ್ಯತೆ ಕ್ಷೀಣಿಸಿತು. ಬೌಲರ್‌ಗಳು ಬಿಗಿಹಿಡಿತ ಸಾಧಿಸಿದರು. ಚಾಹಲ್‌ಗೆ ಅತಿ ಹೆಚ್ಚು ವಿಕೆಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಅವರು ಒಟ್ಟು 143 ಪಂದ್ಯಗಳನ್ನು ಆಡಿ 187 ವಿಕೆಟ್‌ಗಳನ್ನು ಗಳಿಸಿದ್ದಾರೆ. ಡ್ವೆನ್ ಬ್ರಾವೊ ಅವರು 183 ವಿಕೆಟ್ ಪಡೆದಿದ್ದ ದಾಖಲೆಯನ್ನು ಚಾಹಲ್ ಮುರಿದರು. ಗುರುವಾರದ ಪಂದ್ಯದಲ್ಲಿ ನಿತೀಶ್ ರಾಣಾ ಅವರ ವಿಕೆಟ್ ಪಡೆದು ಈ ದಾಖಲೆ ಮೀರಿದರು. ಪಿಯೂಷ್ ಚಾವ್ಲಾ (174) ಮೂರನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.