2023: ; ಮುಂಬೈ ಎದುರು ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಬೌಲಿಂಗ್ ಆಯ್ಕೆ ಮುಂಬೈ: ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡವನ್ನು ಇಂದು ಎದುರಿಸುತ್ತಿದೆ. ಟಾಸ್ ಗೆದ್ದಿರುವ ಗುಜರಾತ್ ಟೈಟನ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದರೆ ಆತಿಥೇಯ ತಂಡಕ್ಕೆ ಪ್ಲೇ ಆಫ್ ಹಾದಿ ಮತ್ತಷ್ಟು ಸುಗಮವಾಗಲಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು ಈಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಭರ್ಜರಿ ಜಯ ಸಾಧಿಸಿತ್ತು. ಹಾಲಿ ಚಾಂಪಿಯನ್ ಗುಜರಾತ್ ತಂಡವು 16 ಅಂಕ ಗಳಿಸಿದೆ. ಈ ಪಂದ್ಯದಲ್ಲಿ ತಂಡವು ಸೋತರೆ ಮೊದಲ ಸ್ಥಾನಕ್ಕೆ ಸಂಚಕಾರವಿಲ್ಲ. ಆದರೆ ಮುಂಬೈ ತಂಡವು ಬಲಿಷ್ಠವಾಗಿರುವ ಗುಜರಾತ್ ತಂಡವನ್ನು ಮಣಿಸಲು ತನ್ನ ಸಂಪೂರ್ಣ ಸಾಮರ್ಥ್ಯ ವಿನಿಯೋಗಿಸುವುದು ಅನಿವಾರ್ಯ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ನೇಹಲ್ ವಡೆರಾ ಹಾಗೂ ಟಿಮ್ ಡೇವಿಡ್ ಅವರು ತಮ್ಮ ಲಯದಲ್ಲಿಯೇ ಮುಂದುವರಿದರೆ ಮುಂಬೈಗೆ ಹೆಚ್ಚು ಅನುಕೂಲವಾಗಲಿದೆ. ನಾಯಕ ರೋಹಿತ್ ಶರ್ಮಾ ಅವರು ಲಯ ಕಂಡುಕೊಳ್ಳುವಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಗುಜರಾತ್ ತಂಡದ ಬೌಲರ್‌ಗಳಾದ ಅನುಭವಿ ಮೋಹಿತ್, ಮೊಹಮ್ಮದ್ ಶಮಿ, ಸ್ಪಿನ್ನರ್ ರಶೀದ್ ಖಾನ್ ಹಾಗೂ ನೂರ್ ಅಹಮದ್ ಅವರನ್ನು ಎದುರಿಸುವ ಸವಾಲು ಮುಂಬೈ ಬ್ಯಾಟರ್‌ಗಳಿಗೆ ಇದೆ. ಗುಜರಾತ್ ತಂಡದ ಬ್ಯಾಟಿಂಗ್ ಕೂಡ ಉತ್ತಮವಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ, ಆರಂಭಿಕ ಬ್ಯಾಟರ್ ಶುಭಮನ್ ಗಿಲ್, ವೃದ್ಧಿಮಾನ್ ಸಹಾ, ಡೇವಿಡ್ ಮಿಲ್ಲರ್ ಹಾಗೂ ಸಾಯಿ ಕಿಶೋರ್ ಉತ್ತಮವಾಗಿ ಆಡುತ್ತಿದ್ದಾರೆ. ಈ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಮುಂಬೈ ತಂಡದ ಬೌಲರ್‌ಗಳಾದ ಸಂದೀಪ್ ವಾರಿಯರ್, ಸ್ಪಿನ್ನರ್ ಪೀಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ ಹಾಗೂ ಕ್ರಿಸ್ ಜೋರ್ಡಾನ್ ಅವರು ತಮ್ಮ ಬತ್ತಳಿಕೆಯಲ್ಲಿರುವ ಅಸ್ತ್ರಗಳನ್ನು ಶಿಸ್ತುಬದ್ಧವಾಗಿ ಪ್ರಯೋಗಿಸಬೇಕು. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನೆಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.