2023 ಕ್ವಾಲಿಫೈಯರ್‌–1 ಪಂದ್ಯ: ಧೋನಿ ಬಳಗಕ್ಕೆ ‘ಗಿಲ್‌ ಪರೀಕ್ಷೆ’ ಚೆನ್ನೈ: ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ ಟೂರ್ನಿಯ ‘ಕ್ವಾಲಿಫೈಯರ್‌–1’ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ತಂಡವನ್ನು ಎದುರಿಸಲಿದ್ದು, ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ. ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಗಕ್ಕೆ ಭಾರತದ ಕ್ರಿಕೆಟ್‌ನ ಹೊಸ ‘ರಾಜಕುಮಾರ’ ಶುಭಮನ್‌ ಗಿಲ್‌ ಅವರು ‘ಅಗ್ನಿಪರೀಕ್ಷೆ’ ಒಡ್ಡಲಿದ್ದಾರೆ. ನಾಯಕನಾಗಿ ಅ‍‍‍ಪಾರ ಯಶಸ್ಸು ಕಂಡಿರುವ ಧೋನಿ ಅವರು ಗಿಲ್‌ ಅಬ್ಬರ ತಡೆಯಲು ಯಾವ ರೀತಿಯ ತಂತ್ರ ರೂಪಿಸುವರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಆರ್‌ಸಿಬಿ ವಿರುದ್ಧ ಭಾನುವಾರ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಗಿಲ್‌, ಭರ್ಜರಿ ಶತಕ ಗಳಿಸಿ ತಮ್ಮ ತಂಡವನ್ನು ಜಯದತ್ತ ಮುನ್ನಡೆಸಿದ್ದರು. ಈ ಋತುವಿನಲ್ಲಿ ಗುಜರಾತ್‌ ತಂಡ ಇದೇ ಮೊದಲ ಬಾರಿ ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿಳಿಯಲಿದೆ. ಸ್ಪಿನ್‌ ಬೌಲಿಂಗ್‌ಗೆ ನೆರವು ನೀಡುವ ಇಲ್ಲಿನ ಪಿಚ್‌, ಹಾರ್ದಿಕ್‌ ಪಾಂಡ್ಯ ಬಳಗಕ್ಕೆ ಸವಾಲಾಗಬಹುದು. ದೀಪಕ್‌ ಚಾಹರ್‌ ಮತ್ತು ಮತೀಶ ಪಥಿರಾಣ ಅವರ ‘ಪವರ್‌ ಪ್ಲೇ’ ಓವರ್‌ಗಳನ್ನು ಎದುರಿಸುವಲ್ಲಿ ತೋರುವ ಛಲ ಕೂಡಾ ಪಂದ್ಯದ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಗುಜರಾತ್‌ ತಂಡವು ದಸುನ್‌ ಶನಕ ಮತ್ತು ಸಾಯಿ ಕಿಶೋರ್‌ ಬದಲು ಜೋಶುವಾ ಲಿಟ್ಲ್‌ ಹಾಗೂ ಯಶ್‌ ದಯಾಳ್‌ ಅವರನ್ನು ಅಂತಿಮ ಇಲೆವೆನ್‌ನಲ್ಲಿ ಆಡಿಸುವ ಚಿಂತನೆ ನಡೆಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಇನಿಂಗ್ಸ್‌ಗೆ ಆರಂಭಿಕ ಬ್ಯಾಟರ್‌ಗಳಾದ ಡೆವೊನ್‌ ಕಾನ್ವೆ ಮತ್ತು ಋತುರಾಜ್‌ ಗಾಯಕವಾಡ್‌ ಅವರು ಭದ್ರ ಬುನಾದಿ ಹಾಕುವುದು ಮುಖ್ಯವಾಗಿದೆ. ಅಜಿಂಕ್ಯ ರಹಾನೆ ಮತ್ತು ಶಿವಂ ದುಬೆ ಕೂಡಾ ಇಲ್ಲಿನ ಪಿಚ್‌ನಲ್ಲಿ ಮಿಂಚಿದ್ದಾರೆ. ಈ ಋತುವಿನಲ್ಲಿ 13 ಇನಿಂಗ್ಸ್‌ಗಳನ್ನು ಆಡಿರುವ ದುಬೆ ಅವರು 33 ಸಿಕ್ಸರ್‌ಗಳನ್ನು ಹೊಡೆದಿದ್ದು, ಆ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಉತ್ಸಾಹದಲ್ಲಿದ್ಧಾರೆ. ಆರ್‌ಸಿಬಿಯ ಫಫ್‌ ಡುಪ್ಲೆಸಿ (36) ಬಳಿಕ ಅತಿಹೆಚ್ಚು ಸಿಕ್ಸರ್‌ ಹೊಡೆದಿರುವ ಬ್ಯಾಟರ್‌ ದುಬೆ. ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಅಷ್ಟೊಂದು ಗಮನ ಸೆಳೆದಿಲ್ಲ. ಮೊಹಮ್ಮದ್‌ ಶಮಿ ಮತ್ತು ರಶೀದ್‌ ಖಾನ್‌ (ತಲಾ 24 ವಿಕೆಟ್‌ ಪಡೆದಿದ್ದಾರೆ) ಅವರನ್ನೊಳಗೊಂಡ ಗುಜರಾತ್‌ ಬೌಲಿಂಗ್‌ ದಾಳಿಯನ್ನು ಎದುರಿಸುವುದು ಸುಲಭವಲ್ಲ ಎಂಬ ಅರಿವು ಧೋನಿ ಬಳಗಕ್ಕೆ ಇದೆ. ಚೆನ್ನೈ ತಂಡದ ಆರಂಭಿಕ ಬ್ಯಾಟರ್‌ಗಳು ಶಮಿ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸುವುದು ಮುಖ್ಯ. ಆರಂಭದಲ್ಲೇ ವಿಕೆಟ್‌ಗಳು ಬಿದ್ದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಮೇಲಿನ ಒತ್ತಡ ಹೆಚ್ಚಲಿದೆ. ಸಿಎಸ್‌ಕೆ ಸ್ಪಿನ್ನರ್‌ಳಾದ ರವೀಂದ್ರ ಜಡೇಜ, ಮೊಯೀನ್‌ ಅಲಿ, ಮಹೀಶ ತೀಕ್ಷಣ ಹಾಗೂ ಟೈಟನ್ಸ್‌ ತಂಡದ ರಶೀದ್‌ ಖಾನ್‌ ಮತ್ತು ನೂರ್‌ ಅಹಮದ್‌ ಅವರ ಪ್ರದರ್ಶನವೂ ಪಂದ್ಯದ ಫಲಿತಾಂಶ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ಎನಿಸಲಿದೆ. ಗೆಲ್ಲುವ ತಂಡ ಫೈನಲ್‌ಗೆ: ಮಂಗಳವಾರದ ಪಂದ್ಯವನ್ನು ಗೆಲ್ಲುವ ತಂಡ ಮೇ 28 ರಂದು ನಡೆಯಲಿರುವ ಫೈನಲ್‌ಗೆ ಪ್ರವೇಶಿಸಲಿದೆ. ಸೋತ ತಂಡಕ್ಕೆ ಇನ್ನೊಂದು ಅವಕಾಶವಿದ್ದು, ಮೇ 26 ರಂದು ನಡೆಯಲಿರುವ ‘ಕ್ವಾಲಿಫೈಯರ್‌–2’ ರಲ್ಲಿ ಆಡಲಿದೆ. ಬಲಾಬಲ: ಉಭಯ ತಂಡಗಳು ಐಪಿಎಲ್‌ನಲ್ಲಿ ಮೂರು ಸಲ ಎದುರಾಗಿದ್ದು, ಮೂರೂ ಬಾರಿ ಗುಜರಾತ್‌ ಗೆದ್ದಿದೆ. ಈ ಸಲ ಲೀಗ್‌ ಹಂತದಲ್ಲಿ ಪೈಪೋಟಿ ನಡೆಸಿದ್ದಾಗ ಪಾಂಡ್ಯ ಬಳಗ ಐದು ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಮತ್ತು ಜಿಯೊ ಸಿನೆಮಾ ಆ್ಯಪ್‌ *** ಪ್ರಮುಖ ಆಟಗಾರರು ಚೆನ್ನೈ ಸೂಪರ್‌ ಕಿಂಗ್ಸ್ ಡೆವೊನ್‌ ಕಾನ್ವೆ;585 ರನ್‌ ಋತುರಾಜ್‌ ಗಾಯಕವಾಡ್;504 ರನ್ ಶಿವಂ ದುಬೆ;385 ರನ್ ತುಷಾರ್ ದೇಶಪಾಂಡೆ;20 ವಿಕೆಟ್‌ ರವೀಂದ್ರ ಜಡೇಜ;17 ವಿಕೆಟ್‌ ಗುಜರಾತ್‌ ಟೈಟನ್ಸ್ ಶುಭಮನ್ ಗಿಲ್;680 ರನ್ ಹಾರ್ದಿಕ್‌ ಪಾಂಡ್ಯ;289 ರನ್ ಮೊಹಮ್ಮದ್‌ ಶಮಿ;24 ವಿಕೆಟ್‌ ರಶೀದ್‌ ಖಾನ್‌;24 ವಿಕೆಟ್‌ ಮೋಹಿತ್‌ ಶರ್ಮಾ;17 ವಿಕೆಟ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.