2023 | ವರುಣ್, ನಾರಾಯಣ್ ಸ್ಪಿನ್ ಮೋಡಿ ಚೆನ್ನೈ : ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸ್ಪಿನ್ ಜೋಡಿ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನಾರಾಯಣ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 144 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ (30; 28ಎ, 4X3) ಹಾಗೂ ಶಿವಂ ದುಬೆ (ಔಟಾಗದೆ 48; 34ಎ, 4X1, 6X3) ಅವರು ಮಹತ್ವದ ಕಾಣಿಕೆ ನೀಡಿದರು. ಉಳಿದ ಬ್ಯಾಟರ್‌ಗಳು ಅಬ್ಬರಿಸದಂತೆ ಕೋಲ್ಕತ್ತ ಬೌಲರ್‌ಗಳು ನೋಡಿಕೊಂಡರು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡಕ್ಕೆ ನಾಲ್ಕನೇ ಓವರ್‌ನಲ್ಲಿಯೇ ಸ್ಪಿನ್ನರ್ ವರುಣ್ ಆಘಾತ ನೀಡಿದರು. ಋತುರಾಜ್ ಗಾಯಕವಾಡ್ ವಿಕೆಟ್ ಗಳಿಸಿದ ಅವರು ಎಂಟನೇ ಓವರ್‌ನಲ್ಲಿ ಅಜಿಂಕ್ಯ ರಹಾನೆಗೂ ಡಗ್‌ಔಟ್ ದಾರಿ ತೋರಿದರು. ಭರವಸೆಯ ಬ್ಯಾಟರ್ ಡೆವೊನ್ ತಮ್ಮ ಆಟದ ವೇಗಕ್ಕೆ ಕಡಿವಾಣ ಹಾಕಿ ತಾಳ್ಮೆಯ ಮೊರೆಹೋದರು. ಅಂಬಟಿ ರಾಯುಡು ಏಳು ಎಸೆತ ಆಡಿ ನಾಲ್ಕು ರನ್ ಮಾತ್ರ ಗಳಿಸಿದರು. ಸುನಿಲ್ ನಾರಾಯಣ ಹಾಕಿದ 11ನೇ ಓವರ್‌ನ ಎಸೆತದ ತಿರುವು ಮತ್ತು ವೇಗ ಅಂದಾಜಿಸುವಲ್ಲಿ ವಿಫಲರಾಗಿ ಕ್ಲೀನ್‌ಬೌಲ್ಡ್ ಆದರು. ಅದೇ ಓವರ್‌ನಲ್ಲಿ ಮೋಯಿನ್ ಅಲಿ ಕೂಡ ಇದೇ ರೀತಿ ಔಟಾದರು. ಈ ಹಂತದಲ್ಲಿ ಶಿವಂ ದುಬೆ ಹಾಗೂ ರವಿಂದ್ರ ಜಡೇಜ (20; 24ಎ) ವಿಕೆಟ್ ಕುಸಿತ ತಡೆಯಲು ಪ್ರಯತ್ನಿಸಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 68 ರನ್‌ ಸೇರಿಸಿದರು. ಇನಿಂಗ್ಸ್‌ನ ಕೊನೆಯ ಎರಡು ಎಸೆತಗಳು ಬಾಕಿಯಿದ್ದಾಗ ಜಡೇಜ ಔಟಾದರು. ಆಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮದ ಅಲೆ ಎದ್ದಿತು! ಚೆನ್ನೈ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಕ್ರೀಸ್‌ಗೆ ಬಂದಿದ್ದು. ಅವರು ಎರಡು ರನ್ ಮಾತ್ರ ಗಳಿಸಿದರು. ಸಂಕ್ಷಿಪ್ತ ಸ್ಕೋರು ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 144 (ಋತುರಾಜ್ ಗಾಯಕವಾಡ್ 17, ಡೆವೊನ್ ಕಾನ್ವೆ 30, ಅಜಿಂಕ್ಯ ರಹಾನೆ 16, ಶಿವಂ ದುಬೆ ಔಟಾಗದೆ 48, ರವೀಂದ್ರ ಜಡೇಜ 20, ಮಹೇಂದ್ರಸಿಂಗ್ ಧೋನಿ ಔಟಾಗದೆ 2, ವರುಣ್ ಚಕ್ರವರ್ತಿ 36ಕ್ಕೆ2, ಸುನಿಲ್ ನಾರಾಯಣ್ 15ಕ್ಕೆ2, ವೈಭವ್ ಅರೋರಾ 30ಕ್ಕೆ1, ಶಾರ್ದೂಲ್ ಠಾಕೂರ್ 15ಕ್ಕೆ1) ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.