2023: ಚೆನ್ನೈ ವಿರುದ್ಧ ಗೆಲುವು– ಕೆಕೆಆರ್‌ ಪ್ಲೇ ಆಫ್‌ ಕನಸು ಜೀವಂತ ಚೆನ್ನೈ: ನಾಯಕ ನಿತೀಶ್‌ ರಾಣಾ ಮತ್ತು ರಿಂಕು ಸಿಂಗ್‌ ಅವರ ಅರ್ಧಶತಕಗಳು ಹಾಗೂ ಸ್ಪಿನ್ನರ್‌ಗಳ ಮೋಡಿಯ ನೆರವಿನಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ, ‘ಮಾಡು–ಮಡಿ’ ‍ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿತು. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 144 ರನ್ ಗಳಿಸಿತು. ಕೆಕೆಆರ್‌ 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗೆಲುವಿನ ಗಡಿ ದಾಟಿತು. ಸಾಧಾರಣ ಗುರಿ ಬೆನ್ನಟ್ಟಿದ ಕೋಲ್ಕತ್ತ ತಂಡಕ್ಕೆ ದೀಪಕ್‌ ಚಾಹರ್‌ (27ಕ್ಕೆ 3) ಆರಂಭಿಕ ಆಘಾತ ನೀಡಿದರು. 33 ರನ್‌ ಗಳಿಸುವಷ್ಟರಲ್ಲಿ ತಂಡ ಮೂರು ವಿಕೆಟ್‌ ಕಳೆದುಕೊಂಡಿತು. ರಹಮಾನುಲ್ಲಾ ಗುರ್ಬಾಜ್ (1), ವೆಂಕಟೇಶ್‌ ಅಯ್ಯರ್ (9) ಮತ್ತು ಜೇಸನ್‌ ರಾಯ್ (12) ಬೇಗನೇ ಮರಳಿದರು. ಆದರೆ ನಿತೀಶ್‌ (ಔಟಾಗದೆ 57, 44 ಎ.) ಮತ್ತು ರಿಂಕು (54 ರನ್‌, 43 ಎ.) ನಾಲ್ಕನೇ ವಿಕೆಟ್‌ಗೆ 99 ರನ್‌ ಸೇರಿಸಿ ತಂಡಕ್ಕೆ ಆಸರೆಯಾದರು. ಚೆನ್ನೈ ತಂಡದ ಬೌಲಿಂಗ್‌ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿದ ಇವರು ಗೆಲುವಿಗೆ ಕಾರಣರಾದರಲ್ಲದೆ, ತಂಡದ ‘ಪ್ಲೇ ಆಫ್‌’ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡರು. ಸ್ಪಿನ್‌ ಮೋಡಿ: ಕೋಲ್ಕತ್ತ ತಂಡದ ಜಯದಲ್ಲಿ ಸ್ಪಿನ್ ಜೋಡಿ ವರುಣ್ ಚಕ್ರವರ್ತಿ (36ಕ್ಕೆ 2) ಹಾಗೂ ಸುನಿಲ್ ನಾರಾಯಣ್ (15ಕ್ಕೆ 2) ಪಾತ್ರವೂ ಪ್ರಮುಖವಾಗಿತ್ತು. ಇವರು ಮಹೇಂದ್ರ ಸಿಂಗ್‌ ಧೋನಿ ಬಳಗವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು. ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ (30; 28ಎ, 4X3) ಹಾಗೂ ಶಿವಂ ದುಬೆ (ಔಟಾಗದೆ 48; 34ಎ, 4X1, 6X3) ಮಾತ್ರ ಮಹತ್ವದ ಕಾಣಿಕೆ ನೀಡಿದರು. ಉಳಿದ ಬ್ಯಾಟರ್‌ಗಳು ಅಬ್ಬರಿಸದಂತೆ ಕೋಲ್ಕತ್ತ ಬೌಲರ್‌ಗಳು ನೋಡಿಕೊಂಡರು. ಚೆನ್ನೈ ತಂಡಕ್ಕೆ ನಾಲ್ಕನೇ ಓವರ್‌ನಲ್ಲಿಯೇ ಸ್ಪಿನ್ನರ್ ವರುಣ್ ಆಘಾತ ನೀಡಿದರು. ಋತುರಾಜ್ ಗಾಯಕವಾಡ್ ವಿಕೆಟ್ ಗಳಿಸಿದ ಅವರು ಎಂಟನೇ ಓವರ್‌ನಲ್ಲಿ ಅಜಿಂಕ್ಯ ರಹಾನೆಗೂ ಡಗ್‌ಔಟ್ ದಾರಿ ತೋರಿದರು. ದುಬೆ ಹೊರತುಪಡಿಸಿ ಮಧ್ಯಮ ಕ್ರಮಾಂಕದ ಇತರ ಬ್ಯಾಟರ್‌ಗಳು ವಿಫಲರಾದರು. ದುಬೆ ಹಾಗೂ ರವಿಂದ್ರ ಜಡೇಜ (20; 24ಎ) ಆರನೇ ವಿಕೆಟ್ ಜೊತೆಯಾಟದಲ್ಲಿ 68 ರನ್‌ ಸೇರಿಸಿದ್ದರಿಂದ ತಂಡದ ಮೊತ್ತ 150ರ ಗಡಿ ಸಮೀಪ ಬಂದು ನಿಂತಿತು. ಭರವಸೆಯ ಬ್ಯಾಟರ್ ಡೆವೊನ್ ತಮ್ಮ ಆಟದ ವೇಗಕ್ಕೆ ಕಡಿವಾಣ ಹಾಕಿ ತಾಳ್ಮೆಯ ಮೊರೆಹೋದರು. ಅಂಬಟಿ ರಾಯುಡು ಏಳು ಎಸೆತ ಆಡಿ ನಾಲ್ಕು ರನ್ ಮಾತ್ರ ಗಳಿಸಿದರು. ಸುನಿಲ್ ನಾರಾಯಣ ಹಾಕಿದ 11ನೇ ಓವರ್‌ನ ಎಸೆತದ ತಿರುವು ಮತ್ತು ವೇಗ ಅಂದಾಜಿಸುವಲ್ಲಿ ವಿಫಲರಾಗಿ ಕ್ಲೀನ್‌ಬೌಲ್ಡ್ ಆದರು. ಅದೇ ಓವರ್‌ನಲ್ಲಿ ಮೋಯಿನ್ ಅಲಿ ಕೂಡ ಇದೇ ರೀತಿ ಔಟಾದರು. ಸಂಕ್ಷಿಪ್ತ ಸ್ಕೋರ್: ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 144 (ಋತುರಾಜ್ ಗಾಯಕವಾಡ್ 17, ಡೆವೊನ್ ಕಾನ್ವೆ 30, ಅಜಿಂಕ್ಯ ರಹಾನೆ 16, ಶಿವಂ ದುಬೆ ಔಟಾಗದೆ 48, ರವೀಂದ್ರ ಜಡೇಜ 20, ಮಹೇಂದ್ರಸಿಂಗ್ ಧೋನಿ ಔಟಾಗದೆ 2, ವರುಣ್ ಚಕ್ರವರ್ತಿ 36ಕ್ಕೆ2, ಸುನಿಲ್ ನಾರಾಯಣ್ 15ಕ್ಕೆ2, ವೈಭವ್ ಅರೋರಾ 30ಕ್ಕೆ1, ಶಾರ್ದೂಲ್ ಠಾಕೂರ್ 15ಕ್ಕೆ1) ಕೋಲ್ಕತ್ತ ನೈಟ್ ರೈಡರ್ಸ್: 18.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 147 (ಜೇಸನ್‌ ರಾಯ್ 12, ನಿತೀಶ್‌ ರಾಣಾ ಔಟಾಗದೆ 57, ರಿಂಕು ಸಿಂಗ್‌ 54, ದೀಪಕ್‌ ಚಾಹರ್‌ 27ಕ್ಕೆ 3) ಫಲಿತಾಂಶ: ಕೆಕೆಆರ್‌ಗೆ 6 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.