2023: ಗಿಲ್‌ ಶತಕದ ಅಬ್ಬರ, ಹೈದರಾಬಾದ್‌ ಗೆಲುವಿಗೆ 189 ರನ್ ಗುರಿ ನೀಡಿದ ಗುಜರಾತ್ ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯ 62ನೇ ಪಂದ್ಯದಲ್ಲಿ ಸೋಮವಾರ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ವಿರುದ್ಧ ಟಾಸ್ ಗೆದ್ದ ಹೈದರಾಬಾದ್, ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಗುಜರಾತ್ ಪರ ಆರಂಭಿಕ ಬ್ಯಾಟರ್ ಶುಭಮನ್ ಗಿಲ್, 58 ಎಸತಗಳಲ್ಲಿ 13 ಬೌಂಡರಿ, 1 ಸಿಕ್ಸರ್‌ ಸಹಿತ ಶತಕ (101) ಸಿಡಿಸಿ ಸಂಭ್ರಮಿಸಿದರು. ಸಾಯಿ ಸುದರ್ಶನ್ 36 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಮೇತ 47 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತ್ರಿಪಾಠಿ ಸೇರಿದಂತೆ ಪ್ರಮುಖ ಆಟಗಾರರು ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ ಹ್ಯಾಟ್ರಿಕ್ ವಿಕೆಟ್‌ ಕಬಳಿಸಿ ಮಿಂಚಿದರು. ಈ ಪಂದ್ಯ ಅವರು ಐದು ವಿಕೆಟ್‌ ಪಡೆದು ಗಮನ ಸೆಳೆದರು. ಉಳಿದಂತೆ ಮಾರ್ಕೊ ಜೆನ್ಸೆನ್‌, ಫಜಲ್‌ಹಕ್ ಫಾರೂಕಿ ಹಾಗೂ ಟಿ.ನಟರಾಜನ್ ತಲಾ ಒಂದೊಂದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಜಯಿಸಿದರೆ ಗುಜರಾತ್ ತಂಡವು ಪ್ಲೇ ಆಫ್‌ ಪ್ರವೇಶಿಸಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡವು 12 ಪಂದ್ಯಗಳನ್ನು ಆಡಿ ಎಂಟರಲ್ಲಿ ಗೆದ್ದು, ನಾಲ್ಕರಲ್ಲಿ ಸೋತಿದೆ. ಇದರಿಂದಾಗಿ ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಜಯಿಸಿದರೂ ಪ್ಲೇಆಫ್‌ ಸ್ಥಾನ ಖಚಿತವಾಗಲಿದೆ. ಆದರೆ ಸನ್‌ರೈಸರ್ಸ್ ತಂಡವು 11 ಪಂದ್ಯಗಳನ್ನು ಆಡಿ ನಾಲ್ಕರಲ್ಲಿ ಗೆದ್ದಿದೆ. ಉಳಿದದ್ದರಲ್ಲಿ ಸೋತಿದೆ. ಇದರಿಂದಾಗಿ ನಾಲ್ಕರ ಘಟ್ಟದ ಹಾದಿಯಿಂದ ಹೊರಬಿದ್ದಂತಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.