2023: ಶುಭಮನ್‌ ಶತಕ, ಮಿಂಚಿದ ಶಮಿ: ಪ್ಲೇ ಆಫ್‌ ಪ್ರವೇಶಿಸಿದ ಗುಜರಾತ್‌ ಟೈಟನ್ಸ್‌ ಅಹಮದಾಬಾದ್: ಆರಂಭ ಆಟಗಾರ ಶುಭಮನ್ ಗಿಲ್‌ ಗಳಿಸಿದ ಬಿರುಸಿನ ಶತಕ, ಮೊಹಮ್ಮದ್‌ ಶಮಿ ಮತ್ತು ಮೋಹಿತ್‌ ಶರ್ಮಾ ಅವರ ಮೊನಚಾದ ಬೌಲಿಂಗ್‌ ನೆರವಿನಿಂದ ಗುಜರಾತ್‌ ಟೈಟನ್ಸ್‌ ತಂಡ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 34 ರನ್‌ಗಳಿಂದ ಗೆದ್ದಿತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡಿದ ಟೈಟನ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 188 ರನ್ ಗಳಿಸಿದರೆ, ಸನ್‌ರೈಸರ್ಸ್‌ ತಂಡ 9 ವಿಕೆಟ್‌ಗಳಿಗೆ 154 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನ ಮೂಲಕ ಹಾರ್ದಿಕ್‌ ಪಾಂಡ್ಯ ಬಳಗ 18 ಪಾಯಿಂಟ್ಸ್‌ಗಳೊಂದಿಗೆ ಪ್ಲೇ ಆಫ್‌ ಪ್ರವೇಶಿಸಿತಲ್ಲದೆ, ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿತು. ಹೈದರಾಬಾದ್‌ ತಂಡದ ಪ್ಲೇ ಆಫ್‌ ಸಾಧ್ಯತೆ ಅಸ್ತಮಿಸಿತು. ಕೇವಲ 58 ಎಸೆತಗಳಲ್ಲಿ ಒಂದು ಸಿಕ್ಸರ್, 13 ಬೌಂಡರಿಗಳಿದ್ದ 101 ರನ್‌ ಸಿಡಿಸಿದ ಗಿಲ್‌ ಅವರು ಟೈಟನ್ಸ್‌ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಆ ಬಳಿಕ ಮೊಹಮ್ಮದ್‌ ಶಮಿ (21ಕ್ಕೆ 4) ಮತ್ತು ಮೋಹಿತ್‌ ಶರ್ಮಾ (28ಕ್ಕೆ 4) ಬಿಗುವಾದ ದಾಳಿ ನಡೆಸಿ ಸನ್‌ರೈಸರ್ಸ್‌ ತಂಡವನ್ನು ಕಟ್ಟಿಹಾಕಿದರು. ಶಮಿ ಅವರ ದಾಳಿಗೆ ನಲುಗಿದ ಏಡನ್‌ ಮರ್ಕರಂ ಬಳಗ 29 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡಿತು. ಅದರಲ್ಲಿ ಮೂರು ವಿಕೆಟ್‌ ಶಮಿ ಪಡೆದರು. ಮೋಹಿತ್‌ ಅವರು ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಸನ್‌ರೈಸರ್ಸ್‌ ತಂಡದ ಹೆನ್ರಿಕ್‌ ಕ್ಲಾಸೆನ್‌ (64 ರನ್‌, 44 ಎ) ಮತ್ತು ಭುವನೇಶ್ವರ್‌ ಕುಮಾರ್‌ (27 ರನ್‌, 26 ಎ.) ಹೊರತುಪಡಿಸಿ ಇತರೆ ಎಲ್ಲರೂ ವಿಫಲರಾದರು. ಭುವನೇಶ್ವರ್ (30ಕ್ಕೆ5) ಬೌಲಿಂಗ್‌ನಲ್ಲೂ ಮಿಂಚಿದ್ದರು. ಗಿಲ್‌, ಸುದರ್ಶನ್‌ ಆಸರೆ: ಕ್ಯಾನ್ಸರ್‌ ಜಾಗೃತಿ ಮೂಡಿಸಲು ತಿಳಿಗುಲಾಬಿ ಬಣ್ಣದ ಜೆರ್ಸಿ ಧರಿಸಿ ಆಡಲು ಇಳಿದ ಗುಜರಾತ್‌ ತಂಡಕ್ಕೆ ಭುವನೇಶ್ವರ್ ಮೊದಲ ಓವರ್‌ನಲ್ಲೇ ಆಘಾತ ನೀಡಿದ್ದರು. ವೃದ್ಧಿಮಾನ್ ಸಹಾ ಖಾತೆ ತೆರೆಯುವ ಮೊದಲೇ ಎರಡನೇ ಸ್ಲಿಪ್‌ನಲ್ಲಿ ಕ್ಯಾಚಿತ್ತರು. ಆದರೆ ಗಿಲ್ ಜೊತೆಗೂಡಿದ ಸಾಯಿ ಸುದರ್ಶನ್ (47, 6 ಬೌಂ, 1ಸಿ) ತಂಡವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದರು. ಭುವನೇಶ್ವರ್ ಮಾಡಿದ ಮೂರನೇ ಓವರ್‌ನಲ್ಲಿ ಸುದರ್ಶನ್ ಮತ್ತು ಗಿಲ್‌ ಮೂರು ಸೊಗಸಾದ ಬೌಂಡರಿ ಸೇರಿದಂತೆ 15 ರನ್ ಸೇರಿಸಿ ರನ್‌ ವೇಗಕ್ಕೆ ಚಾಲನೆ ನೀಡಿದರು. ಸುದರ್ಶನ್ ಜೊತೆ ಗಿಲ್‌ ಎರಡನೇ ವಿಕೆಟ್‌ಗೆ ಸೇರಿಸಿದ 147 ರನ್‌ಗಳ ಬಲದಿಂದ ಒಂದು ಹಂತದಲ್ಲಿ ಟೈಟನ್ಸ್ ತಂಡ ಸುಲಭವಾಗಿ 200 ರನ್‌ಗಳ ಮೊತ್ತವನ್ನು ದಾಟುವಂತೆ ಕಂಡಿತ್ತು. ಆದರೆ ಕೊನೆಯ ಐದು ಓವರ್‌ಗಳಲ್ಲಿ ಸನ್‌ರೈಸರ್ಸ್‌ ತಂಡ ಎದುರಾಳಿಗಳ ಬಿರುಸಿನ ಆಟಕ್ಕೆ ಕಡಿವಾಣ ತೊಡಿಸಿತು. ಈ ಅವಧಿಯಲ್ಲಿ 34 ರನ್‌ಗಳಷ್ಟೇ ಬಂದವು. ಅಷ್ಟೇ ಅಲ್ಲ, ಏಳು ವಿಕೆಟ್‌ಗಳನ್ನೂ ಕಳೆದುಕೊಂಡಿತು. ಉತ್ತಮ ಲಯದಲ್ಲಿರುವ ಗಿಲ್‌, ಡ್ರೈವ್, ಫ್ಲಿಕ್‌, ಪುಲ್‌ ಹೊಡೆತಗಳ ಮೂಲಕ ರನ್‌ ಪೇರಿಸುತ್ತ ಹೋದರು. ವಿಜಯ್ ಶಂಕರ್ ಬದಲು ಅವಕಾಶ ಪಡೆದ ಸುದರ್ಶನ್ ಅದನ್ನು ಪೂರ್ಣವಾಗಿ ಬಳಸಿಕೊಂಡರು. 10 ಓವರುಗಳಲ್ಲೇ ತಂಡದ ಮೊತ್ತ 100 ದಾಟಿತ್ತು. ಮಾರ್ಕೊ ಜೆನ್ಸೆನ್‌ 15ನೇ ಓವರ್‌ನಲ್ಲಿ ಕೊನೆಗೂ ಸುದರ್ಶನ್ ವಿಕೆಟ್‌ ಪಡೆದು ಜೊತೆಯಾಟ ಮುರಿದರು. ಹಾರ್ದಿಕ್‌ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನ್ನೊಂದೆಡೆ ತಂಡದ ಮೊತ್ತ ಹೆಚ್ಚಿಸುತ್ತ ಹೋದ ಗಿಲ್‌ 19ನೇ ಓವರ್‌ನಲ್ಲಿ ಮೂರಂಕಿಯ ಗಡಿ ದಾಟಿದರು. ಇದು ಐಪಿಎಲ್‌ನಲ್ಲಿ ಅವರ ಚೊಚ್ಚಲ ಶತಕ. ಕಳೆದ ವರ್ಷ ಗಳಿಸಿದ 96 ರನ್‌ ಈ ಹಿಂದಿನ ಅವರ ಅತ್ಯಧಿಕ ಸ್ಕೋರ್‌ ಆಗಿತ್ತು. ಆಕರ್ಷಕ ದಾಳಿ ಪ್ರದರ್ಶಿಸಿದ ಭುವನೇಶ್ವರ್ ಕುಮಾರ್ ಕೊನೆಯ ಓವರ್‌ನಲ್ಲಿ ಗಿಲ್‌ ಅವರ ವಿಕೆಟ್‌ ಸೇರಿದಂತೆ ಮೂರು ವಿಕೆಟ್‌ಗಳನ್ನು ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.