2023 ಮುಂಬೈಗೆ ಇಂದು ಲಖನೌ ಸವಾಲು ಲಖನೌ: ಐಪಿಎಲ್‌ ಟೂರ್ನಿ ಅಂತಿಮ ಹಂತದತ್ತ ಕಾಲಿಟ್ಟಿರುವಂತೆ ಮುಂಬೈ ತಂಡ ಯಶಸ್ಸಿನ ಓಟದಲ್ಲಿದೆ. ಲಖನೌ ಸೂಪರ್‌ ಜೈಂಟ್ಸ್ ತಂಡ ಮಂಗಳವಾರ ನಡೆಯುವ ಪಂದ್ಯದಲ್ಲಿ ಮುಂಬೈ ತಂಡದ ಈ ನಾಗಾಲೋಟಕ್ಕೆ ಲಗಾಮು ಹಾಕುವ ಗುರಿಯೊಡನೆ ಕಣಕ್ಕಿಳಿಯಲಿದೆ. ಒಂದು ಹಂತದಲ್ಲಿ ಪಾಯಿಂಟ್‌ ಪಟ್ಟಿಯ ಕೆಳಭಾಗದಲ್ಲಿದ್ದ ರೋಹಿತ್‌ ಪಡೆ, ಕಳೆದ ಕೆಲವು ಪಂದ್ಯಗಳ ಯಶಸ್ಸಿನಿಂದ ಈಗ 14 ಪಾಯಿಂಟ್‌ಗಳೊಡನೆ ಮೂರನೇ ಸ್ಥಾನಕ್ಕೆ ಜಿಗಿದಿದೆ. ಲಖನೌ ತಂಡ ಕೂಡ 12 ಪಂದ್ಯಗಳನ್ನು ಆಡಿದ್ದು 13 ಪಾಯಿಂಟ್ಸ್‌ನೊಡನೆ ನಾಲ್ಕನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಗೆಲುವಿನೊಡನೆ ಪ್ಲೇ ಆಫ್‌ ಹಂತಕ್ಕೆ ಸ್ಥಾನ ಖಚಿತಪಡಿಸಲು, ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪೈಪೋಟಿಗಿಳಿಯಲಿವೆ. ಆರಂಭದಲ್ಲಿ ಪರದಾಡಿದ್ದ ಪ್ರಮುಖ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್ ಲಯಕ್ಕೆ ಮರಳಿದ್ದು, ಅವರ ಅಬ್ಬರದ ಆಟದಿಂದಾಗಿ ಮುಂಬೈ ಒಂದರ ಮೇಲೊಂದು ಗೆಲುವು ಸಾಧಿಸುತ್ತಿದೆ. ನಾಯಕ ರೋಹಿತ್‌ ಶರ್ಮಾ ಅವರಿಂದ ತಂಡ ಉತ್ತಮ ಆಟ ನಿರೀಕ್ಷಿಸುತ್ತಿದೆ. ತಿಲಕ್ ವರ್ಮಾ ಗೈರುಹಾಜರಿಯನ್ನು ಇನ್ನೊಬ್ಬ ಬ್ಯಾಟರ್ ನೇಹಲ್ ವಡೇರಾ ಸಮರ್ಥವಾಗಿ ತುಂಬಿದ್ದು, ಚೇತೋಹಾರಿ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿಅನುಭವಿ ಪಿಯೂಷ್‌ ಚಾವ್ಲಾ ಪರಿಣಾಮಕಾರಿ ಆಗಿದ್ದಾರೆ. ‘ಲಂಬೂಜಿ’ ಬೌಲರ್‌ ಆಕಾಶ್ ಬಧ್ವಾಲ್ ವೇಗದ ದಾಳಿಗೆ ಬಲ ತುಂಬಿದ್ದಾರೆ. ದೌರ್ಬಲ್ಯ ಎಂದರೆ ಕೊನೆಯ ಕೆಲವು ಓವರ್‌ಗಳಲ್ಲಿ ರನ್‌ ಸೋರುತ್ತಿರುವುದು. ಜೋಫ್ರಾ ಅರ್ಚರ್‌ ಬದಲು ಸ್ಥಾನ ಪಡೆದಿರುವ ವೇಗದ ಬೌಲರ್ ಕ್ರಿಸ್‌ ಜೋರ್ಡಾನ್ ಅವರೂ ಕೂಡ ಧಾರಾಳಿ ಎನಿಸಿದ್ದಾರೆ. ಇಲ್ಲಿನ ಪಿಚ್‌ ಸ್ಪಿನ್ನರ್‌ಸ್ನೇಹಿಯಾಗಿರುವ ಎರಡೂ ಕಡೆಯ ಸ್ಪಿನ್ನರ್‌ಗಳ ನಿರ್ವಹಣೆಯ ಮೇಲೆ ಪಂದ್ಯದ ಹಣೆಬರಹ ನಿರ್ಧಾರವಾಗುವ ನಿರೀಕ್ಷೆಯಿದೆ. ಲಖನೌ ಕಡೆ ಲೆಗ್‌ ಸ್ಪಿನ್ನರ್ ರವಿ ಬಿಷ್ಣೋಯಿ ಹೆಚ್ಚು ಪರಿಣಾಮಕಾರಿ ಆಗಿದ್ದಾರೆ. ಹೈದರಾಬಾದ್ ವಿರುದ್ಧ ನಾಯಕ ಕೃಣಾಲ್ ಪಾಂಡ್ಯ ಅವರ ಎಡಗೈ ಸ್ಪಿನ್ ಕೂಡ ನೆರವಿಗೆ ಬಂದಿತ್ತು. ಹಳೆಯಹುಲಿ ಅಮಿತ್ ಮಿಶ್ರಾ ಕೂಡ ಆಡುವ ಸಾಧ್ಯತೆಯಿದೆ. ವೇಗಿ ಆವೇಶ್ ಖಾನ್ (9 ಪಂದ್ಯಗಳ ಇಕಾನಮಿ ದರ 9.75) ಇದುವರೆಗೆ ಅಂಥ ಪರಿಣಾಮ ಬೀರಿಲ್ಲ. ಬ್ಯಾಟರ್‌ಗಳ ಪೈಕಿ ಕೈಲ್‌ ಮೇಯರ್ಸ್‌ ಇದುವರೆಗೆ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಗಾಯಾಳು ಕೆ.ಎಲ್‌.ರಾಹುಲ್ ಬದಲು ಅವಕಾಶ ಪಡೆದ ಕ್ವಿಂಟನ್‌ ಡಿಕಾಕ್ ನಿರಾಸೆ ಮೂಡಿಸಿಲ್ಲ. ನಿಕೋಲಸ್ ಪೂರನ್ ಕೆಲವು ಪಂದ್ಯಗಳಲ್ಲಿ ಗೆಲುವಿನ ಇನಿಂಗ್ಸ್ ಆಡಿದ್ದಾರೆ. ಸೌರಾಷ್ಟ್ರ ಆಟಗಾರ ಪ್ರೇರಕ್ ಮಂಕಡ್‌ ಮೂರನೇ ಕ್ರಮಾಂಕದಲ್ಲಿ ತಾವು ಸಮರ್ಥ ಎಂದು ಹಿಂದಿನ ಪಂದ್ಯದಲ್ಲಿ ಸಾಬೀತುಮಾಡಿದ್ದಾರೆ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೊ ಸಿನೆಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.