‘ಸಾಫ್ಟ್‌ ಸಿಗ್ನಲ್‌’ ನಿಯಮ ರದ್ದುಗೊಳಿಸಿದ ಐಸಿಸಿ ಲಂಡನ್‌ (ಎಎಫ್‌ಪಿ): ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದ್ದ ‘ಸಾಫ್ಟ್‌ ಸಿಗ್ನಲ್‌’ ನಿಯಮವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ರದ್ದುಗೊಳಿಸಿದೆ. ‘ಮೈದಾನದ ಅಂಪೈರ್‌ಗಳು ಯಾವುದೇ ತೀರ್ಪಿನ ಪರಿಶೀಲನೆಗಾಗಿ ಟಿ.ವಿ ಅಂಪೈರ್‌ ಮೊರೆಹೋಗುವ ಮುನ್ನ ಸಾಫ್ಟ್‌ ಸಿಗ್ನಲ್‌ ಕೊಡುವಂತಿಲ್ಲ. ಔಟ್‌ ಅಥವಾ ನಾಟೌಟ್‌ ಎಂಬ ನಿರ್ಧಾರವನ್ನು ತೆಗೆದುಕೊಳ್ಳದೆಯೇ ನೇರವಾಗಿ ಟಿ.ವಿ ಅಂಪೈರ್‌ ಮೊರೆ ಹೋಗಬೇಕು’ ಎಂದು ‍ಐಸಿಸಿ ಪ್ರಕಟಣೆ ಹೇಳಿದೆ. ಏನಿದು ಸಾಫ್ಟ್‌ ಸಿಗ್ನಲ್‌: ಮೈದಾನದ ಅಂಪೈರ್‌ಗಳಿಗೆ ಕೆಲವೊಮ್ಮೆ ಸ್ಪಷ್ಟ ತೀರ್ಪು ನೀಡಲು ಆಗುವುದಿಲ್ಲ. ಉದಾಹರಣೆಗೆ, ಫೀಲ್ಡರ್‌ ಕ್ಯಾಚ್‌ ಪಡೆಯುವಾಗ ಚೆಂಡು ನೆಲಕ್ಕೆ ತಾಗಿದೆಯೇ, ಇಲ್ಲವೇ ಎಂಬುದು ನಿಖರವಾಗಿ ಕಾಣಿಸದೇ ಇದ್ದಾಗ ಟಿ.ವಿ ಅಂಪೈರ್‌ನ ನೆರವು ಪಡೆಯುವರು. ಆದರೆ ಟಿ.ವಿ. ಅಂಪೈರ್‌ನ ಮೊರೆ ಹೋಗುವ ಮುನ್ನ ತನ್ನ ನಿರ್ಧಾರ ಏನೆಂಬುದನ್ನು (ಔಟ್‌ ಅಥವಾ ನಾಟೌಟ್‌) ಸಂಜ್ಞೆಯ ಮೂಲಕ (ಸಾಫ್ಟ್‌ ಸಿಗ್ನಲ್‌) ತಿಳಿಸುವರು. ಟಿ.ವಿ ಅಂಪೈರ್‌ ರಿಪ್ಲೇ ವೀಕ್ಷಿಸಿ ಅಂತಿಮ ತೀರ್ಪು ನೀಡುವರು. ಕೆಲವೊಮ್ಮೆ ಟಿ.ವಿ ರಿಪ್ಲೇನಲ್ಲೂ ಸ್ಪಷ್ಟವಾಗಿ ಕಾಣಿಸದೇ ಇದ್ದರೆ, ಮೈದಾನದ ಅಂಪೈರ್‌ ‘ಸಾಫ್ಟ್‌ ಸಿಗ್ನಲ್‌’ ಮೂಲಕ ನೀಡಿದ್ದ ತೀರ್ಪು ಅಂತಿಮವಾಗುತ್ತದೆ. ಮೈದಾನದ ಅಂಪೈರ್‌ ನೀಡುವ ‘ಸಾಫ್ಟ್‌ ಸಿಗ್ನಲ್‌’, ಮೂರನೇ ಅಂಪೈರ್‌ (ಟಿ.ವಿ ಅಂಪೈರ್‌) ನೀಡುವ ಅಂತಿಮ ತೀರ್ಪಿನ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಕೆಲವು ಆಟಗಾರರು ಆತಂಕ ವ್ಯಕ್ತಪಡಿಸಿದ್ದರು. ಈ ನಿಯಮ ರದ್ದುಗೊಳಿಸಬೇಕು ಎಂದು ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಈಚೆಗೆ ಒತ್ತಾಯಿಸಿದ್ದರು. ಹೆಲ್ಮೆಟ್‌ ಕಡ್ಡಾಯ: ಬ್ಯಾಟರ್‌ಗಳು ವೇಗದ ಬೌಲರ್‌ಗಳನ್ನು ಎದುರಿಸುವಾಗ ಮತ್ತು ವಿಕೆಟ್‌ ಕೀಪರ್‌ಗಳು ಸ್ಟಂಪ್‌ ಸಮೀಪ ನಿಲ್ಲುವಾಗ ಹೆಲ್ಮೆಟ್‌ ಧರಿಸುವುದು ಕಡ್ಡಾಯ ಎಂದು ಐಸಿಸಿಯ ಹೊಸ ನಿಯಮ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.