ರಿಲೀ ರುಸೊ ಅಬ್ಬರದ ಆಟ; ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಜಯಭೇರಿ ಧರ್ಮಶಾಲಾ (ಪಿಟಿಐ): ರಿಲೀ ರುಸೊ ಅವರ ಅಬ್ಬರದ ಅಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 15 ರನ್‌ಗಳಿಂದ ಮಣಿಸಿತು. ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಡೇವಿಡ್‌ ವಾರ್ನರ್‌ ಬಳಗ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 213 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ರುಸೊ ಕೇವಲ 37 ಎಸೆತಗಳಲ್ಲಿ ಅಜೇಯ 82 ರನ್‌ ಗಳಿಸಿದರು. ಪಂಜಾಬ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 198 ರನ್‌ ಗಳಿಸಿತು. ಲಿಯಾಮ್‌ ಲಿವಿಂಗ್‌ಸ್ಟೋನ್‌ (94 ರನ್‌, 48 ಎ.) ಅವರ ವೀರೋಚಿತ ಹೋರಾಟ ವ್ಯರ್ಥವಾಯಿತು. ಈಗಾಗಲೇ ‘ಪ್ಲೇ ಆಫ್‌’ ರೇಸ್‌ನಿಂದ ಹೊರಬಿದ್ದಿರುವ ಡೆಲ್ಲಿ ತಂಡ, ಪಂಜಾಬ್‌ ತಂಡದ ಪ್ಲೇ ಆಫ್‌ ಪ್ರವೇಶದ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿತು. ಧವನ್‌ ಬಳಗ ಅಂತಿಮ ಪಂದ್ಯ ಗೆದ್ದರೂ, ಮುಂದಿನ ಹಂತ ಪ್ರವೇಶಿಸಲು ಇತರ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಬೇಕಿದೆ. ಸವಾಲಿನ ಗುರಿ ಬೆನ್ನಟ್ಟಿದ ಪಂಜಾಬ್‌ ತಂಡವು ಖಾತೆ ತೆರೆಯುವ ಮುನ್ನವೇ ಧವನ್‌ ವಿಕೆಟ್‌ ಕಳೆದುಕೊಂಡಿತು. ಅವರು ಇಶಾಂತ್‌ ಶರ್ಮಾ ಬೌಲಿಂಗ್‌ನಲ್ಲಿ ಅಮನ್‌ ಹಕೀಮ್‌ಗೆ ಕ್ಯಾಚಿತ್ತರು. ಪ್ರಭಸಿಮ್ರನ್‌ (22) ಮತ್ತು ಅಥರ್ವ ತೈಡೆ (55) ಎರಡನೇ ವಿಕೆಟ್‌ಗೆ 50 ರನ್‌ ಸೇರಿಸಿದರು. ಪ್ರಭಸಿಮ್ರನ್‌ ಔಟಾದ ಬಳಿಕ ಬಂದ ಲಿವಿಂಗ್‌ಸ್ಟೋನ್‌ ಮತ್ತು ತೈಡೆ ಉತ್ತಮವಾಗಿ ಆಡಿದರು. ಮೂರನೇ ವಿಕೆಟ್‌ಗೆ 78 ರನ್‌ಗಳು ಬಂದವು. ಈ ವೇಳೆ ತೈಡೆ ಗಾಯಗೊಂಡು ಹೊರನಡೆದರು. ಇದು ಪಂಜಾಬ್‌ಗೆ ಹಿನ್ನಡೆ ಉಂಟುಮಾಡಿತು. ಬಳಿಕ ಬಂದ ಎಲ್ಲ ಬ್ಯಾಟರ್‌ಗಳೂ ವಿಫಲರಾದರು. ಲಿಯಾಮ್‌ ಕೊನೆಯವರೆಗೂ ಹೋರಾಡಿದರೂ ಗೆಲುವ ದಕ್ಕಲಿಲ್ಲ. ಉತ್ತಮ ಆರಂಭ: ಇದಕ್ಕೂ ಮುನ್ನ ಟಾಸ್ ಗೆದ್ದ ಪಂಜಾಬ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಡೆಲ್ಲಿ ತಂಡದ ಆರಂಭಿಕ ಜೋಡಿ ಡೇವಿಡ್ ವಾರ್ನರ್ (46; 31ಎ, 4X5, 6X2) ಹಾಗೂ ಪೃಥ್ವಿ ಶಾ (54; 38ಎ, 4X7, 6X1) ಉತ್ತಮ ಅಡಿಪಾಯ ಹಾಕಿದರು. 10 ಓವರ್‌ಗಳಲ್ಲಿ 94 ರನ್‌ ರನ್‌ಗಳ ಜೊತೆಯಾಟವಾಡಿದರು. ಹನ್ನೊಂದನೇ ಓವರ್‌ನಲ್ಲಿ ಸ್ಯಾಮ್ ಕರನ್ ಅವರು ವಾರ್ನರ್ ವಿಕೆಟ್ ಗಳಿಸುವ ಮೂಲಕ ಜೊತೆಯಾಟ ಮುರಿದರು. ವಾರ್ನರ್ ಅಲ್ಪ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಅರ್ಧಶತಕ ಪೂರೈಸಿ ಆಟವಾಡುತ್ತಿದ್ದ ಪೃಥ್ವಿ ಶಾ ಅವರ ವಿಕೆಟ್‌ ಕೂಡ ಸ್ಯಾಮ್ ಪಾಲಾಯಿತು. ಆದರೆ ಇದರ ನಂತರದ ಆಟದಲ್ಲಿ ಪಂಜಾಬ್‌ ಪಾಳೆಯಕ್ಕೆ ವಿಕೆಟ್‌ ಗಳಿಸುವ ಅವಕಾಶ ಸಿಗಲಿಲ್ಲ. ರಿಲೀ ರುಸೊ ಹಾಗೂ ಫಿಲಿಪ್ ಸಾಲ್ಟ್ ಅವರ ಅಬ್ಬರದ ಜೊತೆಯಾಟದ ಮುಂದೆ ಬೌಲರ್‌ಗಳು ಬಸವಳಿದರು. ಕೊನೆಯ ಐದು ಓವರ್‌ಗಳಲ್ಲಿ ಇವರಿಬ್ಬರೂ ಸೇರಿ 65 ರನ್‌ಗಳನ್ನು ಗಳಿಸಿದರು. ಇದರಿಂದಾಗಿ ತಂಡದ ಮೊತ್ತವು ಇನ್ನೂರರ ಗಡಿ ದಾಟಿತು. ದಕ್ಷಿಣ ಆಫ್ರಿಕಾದ ರುಸೊ ಅವರು ಯಾವುದೇ ಹಂತದಲ್ಲಿಯೂ ವಿಚಲಿತರಾಗದೇ ಇನಿಂಗ್ಸ್ ಕಟ್ಟಿದರು. ಸಾಲ್ಟ್ 14 ಎಸೆತಗಳಲ್ಲಿ 26 ರನ್‌ ಗಳಿಸಿದರು. ಅದರಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿದ್ದವು. ಈ ಇನಿಂಗ್ಸ್‌ನಲ್ಲಿ ಒಟ್ಟು 11 ಸಿಕ್ಸರ್ ಹಾಗೂ 20 ಬೌಂಡರಿಗಳು ದಾಖಲಾದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.