ಐಪಿಎಲ್‌ 2023: ನಾಲ್ಕರ ಘಟ್ಟದತ್ತ ಲಖನೌ ಚಿತ್ತ ಕೋಲ್ಕತ್ತ: ಈ ಬಾರಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್‌ ಪ್ರವೇಶಿಸಲು ತಂಡಗಳ ನಡುವೆ ಅತ್ಯಂತ ನಿಕಟ ಪೈಪೋಟಿ ಏರ್ಪಟ್ಟಿದೆ. ಎಲ್ಲ ತಂಡಗಳಿಗೂ ಕೊನೆಯ ಒಂದು ಸುತ್ತಿನ ಪಂದ್ಯ ಉಳಿದಿರುವ ಈ ಹೊತ್ತಿನಲ್ಲಿಯೂ ಗುಜರಾತ್ ಟೈಟನ್ಸ್ ಬಿಟ್ಟರೆ ಬೇರೆ ಯಾವ ತಂಡವೂ ಅಂತಿಮ ನಾಲ್ಕರಲ್ಲಿ ಸ್ಥಾನ ಗಟ್ಟಿಗೊಳಿಸಿಕೊಂಡಿಲ್ಲ. ಈ ಸ್ಪರ್ಧೆಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಲಖನೌ ಸೂಪರ್ ಜೈಂಟ್ಸ್‌ ತಂಡವು ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್‌ ಬಳಗವನ್ನು ಎದುರಿಸಲಿದೆ. ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದರೆ ಲಖನೌ ತಂಡದ ಪ್ಲೇ ಆಫ್ ಸ್ಥಾನ ಖಚಿತವಾಗುವುದು. 15 ಅಂಕಗಳು ತಂಡದ ಖಾತೆಯಲ್ಲಿವೆ. ಆದರೆ 12 ಅಂಕ ಗಳಿಸಿರುವ ಆತಿಥೇಯ ಕೋಲ್ಕತ್ತ ತಂಡವು ಗೆದ್ದರೂ ಪ್ಲೇಆಫ್‌ ಪ್ರವೇಶದ ಹಾದಿ ಸುಲಭವಿಲ್ಲ. ಆದರೆ, ಲಖನೌ ತಂಡಕ್ಕೂ ಕಷ್ಟವಾಗಬಹುದು. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ಎದುರು ಹಾಗೂ ಮುಂಬೈ ಇಂಡಿಯನ್ಸ್ ಬಳಗವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪರಾಭವಗೊಂಡರೆ ಮಾತ್ರ ಲಖನೌ ಪ್ರವೇಶ ಸುಲಭವಾಗುವುದು. ಆದರೆ ಈ ಪಂದ್ಯದಲ್ಲಿ ಜಯಭೇರಿ ಬಾರಿಸಿ ಎರಡನೇ ಸ್ಥಾನಕ್ಕೆ ಲಗ್ಗೆಯಿಡುವ ಛಲದಲ್ಲಿ ನಾಯಕ ಕೃಣಾಲ್ ಬಳಗವಿದೆ. ತನ್ನ ಕಳೆದೆರಡು ಪಂದ್ಯಗಳಲ್ಲಿ ಅಮೋಘ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿದೆ. ಆರಂಭಿಕ ಬ್ಯಾಟರ್‌ಗಳು ವೈಫಲ್ಯ ಅನುಭವಿಸುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ ಮತ್ತು ನಿಕೊಲಸ್ ಪೂರನ್ ಅವರ ಸಿಡಿಲಬ್ಬರ ಮುಂದುವರಿದಿದೆ. ಯುವ ಬ್ಯಾಟರ್ ಆಯುಷ್ ಬಡೋಣಿ, ಪ್ರೇರಕ್ ಮಂಕಡ್ ಉತ್ತಮ ಕಾಣಿಕೆ ನೀಡುವ ಸಮರ್ಥರಾಗಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ, ಮಧ್ಯಮವೇಗಿ ಮೊಹಸೀನ್ ಖಾನ್ ಮತ್ತು ಯಶ್ ಠಾಕೂರ್ ಅವರು ಉತ್ತಮ ಲಯದಲ್ಲಿದ್ದಾರೆ. ಆದರೆ ಕೆಕೆಆರ್ ತಂಡವು ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಿಸಿತ್ತು. ನಾಯಕ ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಮಧ್ಯಮ ಕ್ರಮದಲ್ಲಿ ಉತ್ತಮ ಲಯದಲ್ಲಿದ್ದಾರೆ. ಆದರೆ ಆ್ಯಂಡ್ರೆ ರಸೆಲ್ , ವೆಂಕಟೇಶ್ ಆಯ್ಯರ್ ಅವರು ತಮ್ಮ ನೈಜ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿದೆ. ಆದರೆ ವರುಣ್ ಚಕ್ರವರ್ತಿ ಮತ್ತು ಸುನಿಲ್ ನಾರಾಯಣ ಬಿಟ್ಟರೆ ಉಳಿದ ಬೌಲರ್‌ಗಳಿಂದ ಸ್ಥಿರ ಪ್ರದರ್ಶನ ಕಂಡುಬರುತ್ತಿಲ್ಲ. ಇದು ತಂಡಕ್ಕೆ ಚಿಂತೆಯ ವಿಷಯವಾಗಿದೆ. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ, ಜಿಯೊ ಸಿನೆಮಾ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.