ಐಪಿಎಲ್ ತಳಕಿಗೆ ‘ಸ್ಮಾರ್ಟ್‌’ ಮೆರುಗು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿಯು ಕೊನೆಯ ಹಂತ ತಲುಪಿದೆ. ಲೀಗ್ ಸುತ್ತಿನ ಕೊನೆಯ ಪಂದ್ಯದವರೆಗೂ ಪ್ಲೇಆಫ್‌ ಸುತ್ತಿಗೆ ಪ್ರವೇಶಿಸುವ ತಂಡಗಳ ಕುರಿತು ಕುತೂಹಲವಿತ್ತು. ಅದರಿಂದಾಗಿಯೇ ಈ ಸಲದ ಟೂರ್ನಿಯಲ್ಲಿ ದಾಖಲೆಗಳು ಆಟಕ್ಕಷ್ಟೆ ಸೀಮಿತವಲ್ಲ. ವೀಕ್ಷಕರಿಂದಲೂ ನೂತನ ದಾಖಲೆಗಳು ಸೃಷ್ಟಿಯಾದವು. ಪಂದ್ಯಗಳನ್ನು ನೋಡಲು ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಕ್ರೀಡಾಂಗಣಗಳಿಗೆ ಜನರು ನುಗ್ಗಿದರು. ಟಿ.ವಿಯಲ್ಲಿಯೂ ಜನರು ನೋಡಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಸ್ಮಾರ್ಟ್‌ ಫೋನ್‌ಗಳು ಅಂಗೈಯಲ್ಲಿ ಅರಮನೆ ತೋರಿಸಿವೆ. ಟಿ.ವಿ ಹಾಗೂ ಡಿಜಿಟಲ್‌ ಮಾಧ್ಯಮಗಳಿಗೆ ಪ್ರತ್ಯೇಕ ಪ್ರಸಾರ ಹಕ್ಕುಗಳನ್ನು ಬಿಡ್ ಮಾಡಿದ್ದ ಬಿಸಿಸಿಐ ಈಗ ಹೆಮ್ಮೆಯಿಂದ ಬೀಗುತ್ತಿದೆ. ಏಕೆಂದರೆ ಮೊಬೈಲ್ ಆ್ಯಪ್‌ನಲ್ಲಿಯೇ ಜನ ಈಗ ಐಪಿಎಲ್ ಪಂದ್ಯಗಳನ್ನು ಹೆಚ್ಚು ವೀಕ್ಷಿಸುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್‌ಜೈಂಟ್ಸ್ ನಡುವಣ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಕೊನೆಯ ಎಸೆತದಲ್ಲಿ ರೋಚಕ ಫಲಿತಾಂಶ ಹೊಮ್ಮಿದ್ದ ಪಂದ್ಯ ಇದು. ಜಿಯೊ ಸಿನಿಮಾ ಆ್ಯಪ್ ಮೂಲಕ ಈ ಪಂದ್ಯಕ್ಕೆ ಸಿಕ್ಕ ವೀಕ್ಷಣೆ 1.8 ಕೋಟಿ. ಇದೇ ಟೂರ್ನಿಯಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಖನೌ ಸೂಪರ್‌ಜೈಂಟ್ಸ್ ನಡುವೆ ಕಳೆದ ವಾರ ನಡೆದಿದ್ದ ಪಂದ್ಯದಲ್ಲಿ ಮಹೇಂದ್ರಸಿಂಗ್ ಧೋನಿ ಹೊಡೆದಿದ್ದ ಸಿಕ್ಸರ್‌ಗಳಿಗೆ ಸಿಕ್ಕ ವೀಕ್ಷಣೆ 1.7 ಕೋಟಿ. ಹಾಗೆ ನೋಡಿದರೆ ಅಹಮದಾಬಾದಿನಲ್ಲಿ ಚೆನ್ನೈ ಹಾಗೂ ಗುಜರಾತ್ ಟೈಟನ್ಸ್ ನಡುವೆ ನಡೆದ ಈ ಟೂರ್ನಿಯ ಮೊದಲ ಪಂದ್ಯದಲ್ಲಿಯೂ ಧೋನಿಯ ಆಟಕ್ಕೆ 1.6 ಕೋಟಿ ವೀಕ್ಷಣೆಗಳಿದ್ದವು. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರೂ ಧೋನಿಯ ಜನಪ್ರಿಯತೆ ಮುಕ್ಕಾಗಿಲ್ಲ. ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ವಿರುದ್ಧದ ಪಂದ್ಯದಲ್ಲಿ ‘ಕ್ಯಾಪ್ಟನ್ ಕೂಲ್’ ಧೋನಿಯ ಆಟ ನಡೆದಾಗ 2.2 ವೀಕ್ಷಣೆಗಳು ದಾಖಲಾಗಿವೆ ಎಂದು ವಯಾಕಾಮ್ –18 ಸಂಸ್ಥೆ ತಿಳಿಸಿದೆ. ಈ ಬಾರಿಯ ಟೂರ್ನಿಗೆ ನೂರು ಕೋಟಿಗೂ ಹೆಚ್ಚು ವಿಕ್ಷಣೆ ದೊರೆತಿದೆ ಎಂಬ ಮಾಹಿತಿ ಇದೆ. ಟಿ.ವಿ ಮೂಲಕ ವೀಕ್ಷಿಸಿದವರ ಸಂಖ್ಯೆ ಬೇರೆಯೇ ಇದೆ. ಒಟ್ಟಿನಲ್ಲಿ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ತಮಗೆ ಸಾಧ್ಯವಿರುವ ಎಲ್ಲ ದಿಕ್ಕುಗಳಿಂದಲೂ ಅಭಿಮಾನಿಗಳು ಲಗ್ಗೆ ಇಡುತ್ತಿದ್ದಾರೆ. ಈ ಬಗೆಯ ‘ನೂಕುನುಗ್ಗಲು’ ಉಂಟಾಗಲು ಕಾರಣಗಳೇನಿರಬಹುದು? ಇಲ್ಲಿ ಮೂರು ಪ್ರಮುಖ ಕಾರಣಗಳು ಎದ್ದು ಕಾಣುತ್ತವೆ. ಮೊದಲನೆಯದಾಗಿ, ಈ ಬಾರಿ ಟಿ.ವಿ. ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಸಾರ ಹಕ್ಕುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಿರುವುದು. ಈ ಎರಡೂ ಬಿಡ್‌ಗಳನ್ನು ಬೇರೆ ಬೇರೆ ಸಂಸ್ಥೆಗಳು ಖರೀದಿಸಿವೆ. ಆ ಸಂಸ್ಥೆಗಳು ಪ್ರೇಕ್ಷಕರನ್ನು ಸೆಳೆಯಲು ಜಿದ್ದಿಗೆ ಬಿದ್ದಿವೆ. ಡಿಜಿಟಲ್ ಆ್ಯಪ್ ಉಚಿತವಾಗಿ ಪ್ರಸಾರ ನೀಡುತ್ತಿದೆ. ಅಲ್ಲದೇ ಪಂದ್ಯದ ನೇರಪ್ರಸಾರವನ್ನು ಮೂರು ಆಯಾಮಗಳ ಕ್ಯಾಮೆರಾಗಳ ಮೂಲಕ ವೀಕ್ಷಿಸುವ (3ಕೆ) ಅವಕಾಶವನ್ನೂ ನೀಡಿದೆ. ಇದು ಕೂಡ ಪ್ರಮುಖ ಆಕರ್ಷಣೆಯಾಗಿದೆ. 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ದೇಶದ ಪ್ರಮುಖ ನಗರಗಳ ಕೆಲವೇ ಕೆಲವು ಮನೆಗಳಲ್ಲಿ ಮಾತ್ರ ಟಿ.ವಿಗಳು ಇದ್ದವು. ಅದಕ್ಕೂ ಮುನ್ನ ಹಾಗೂ ನಂತರದ ಕೆಲವು ವರ್ಷಗಳವರೆಗೂ ಪಂದ್ಯಗಳನ್ನು ಬಾನುಲಿಯ ಕಾಮೆಂಟ್ರಿಯ ಮೂಲಕವೇ ಆಸ್ವಾದಿಸಬೇಕಿತ್ತು. ಪಾಕೆಟ್ ರೇಡಿಯೊ ಎಲ್ಲರಿಗೂ ಮೆಚ್ಚಿನದಾಗಿತ್ತು. ನಂತರ ಅದೇ ಕೈಗಳಿಗೆ ಟಿ.ವಿ ರಿಮೋಟ್ ಇತ್ತು. ಈಗ ಸ್ಮಾರ್ಟ್‌ಫೋನ್ ಹೊಸಲೋಕವನ್ನು ತೆರೆದಿಟ್ಟಿದೆ. ಎರಡನೆಯದಾಗಿ, ಹೊಸದಾಗಿ ಜಾರಿಯಾಗಿರುವ ಕೆಲವು ನಿಯಮಗಳು. ಈ ಮೊದಲು ಟಾಸ್ ಆಗುವ ಮುನ್ನವೇ ಉಭಯ ತಂಡಗಳು ಕಣಕ್ಕಿಳಿಯುವ ತಮ್ಮ 11 ಆಟಗಾರರ ಪಟ್ಟಿಯನ್ನು ಪ್ರಕಟಿಸಬೇಕಿತ್ತು. ಆದರೆ ಈಗ ಟಾಸ್ ಆದ ನಂತರ ಆಡುವ ಬಳಗವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ತಂಡ ಸಂಯೋಜನೆ ಮತ್ತು ತಂತ್ರಗಾರಿಕೆಗಳಲ್ಲಿ ಬದಲಾವಣೆಯಾಗಿದೆ. ಅದಕ್ಕಾಗಿಯೇ ಈಗ ಟಾಸ್‌ ಗೆದ್ದವರೇ ಹೆಚ್ಚು ಪಾರಮ್ಯ ಮೆರೆಯುವ ಕಾಲ ಹೋಗಿದೆ. ಆರ್‌ಸಿಬಿ ತಂಡವು ತನ್ನ ತವರಿನಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಮೂರರಲ್ಲಿ ಟಾಸ್ ಜಯಿಸಿತ್ತು. ಆದರೆ ತಂಡವು ಜಯಿಸಿದ್ದು ಒಂದು ಪಂದ್ಯ ಮಾತ್ರ. ಟಾಸ್ ಸೋತಿದ್ದ ನಾಲ್ಕರಲ್ಲಿ ಎರಡು ಪಂದ್ಯ ಗೆದ್ದಿತ್ತು. ಅದೇ ತವರಿನಾಚೆಯ ಪಂದ್ಯಗಳಲ್ಲಿ ಟಾಸ್ ಗೆದ್ದ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯಭೇರಿ ಬಾರಿಸಿತ್ತು. ರಾಜಸ್ಥಾನ ರಾಯಲ್ಸ್ ಹತ್ತು ಬಾರಿ ಟಾಸ್ ಗೆದ್ದಿತ್ತು. ಆದರೆ ಪ್ಲೇ ಆಫ್‌ ಹಂತವನ್ನೇ ಪ್ರವೇಶಿಸಲಿಲ್ಲ. ಕಳೆದ ಕೆಲವು ಟೂರ್ನಿಗಳಲ್ಲಿ ಇಬ್ಬನಿ ಮತ್ತು ಪಿಚ್‌ ಪರಿಸ್ಥಿತಿಯ ಲೆಕ್ಕಾಚಾರದ ಮೇಲೆ ಟಾಸ್ ಗೆದ್ದ ನಾಯಕ ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇರುಳು ಕವಿದಂತೆ ತೇವಾಂಶ ಹೆಚ್ಚಿ ಬೌಲಿಂಗ್ ಹಾಗೂ ಫೀಲ್ಡಿಂಗ್ ಕಠಿಣವಾಗುವುದರಿಂದ ಟಾಸ್ ಜಯಿಸಿದವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದೇ ಹೆಚ್ಚು. ಅವರೇ ಪಂದ್ಯಗಳನ್ನು ಹೆಚ್ಚು ಗೆದ್ದಿರುವ ದಾಖಲೆಗಳೂ ಇವೆ. ಈ ಬಾರಿಯೂ ಇಲ್ಲಿಯವರೆಗೆ ನಡೆದ ಪಂದ್ಯಗಳ ಪೈಕಿ ಟಾಸ್ ಗೆದ್ದವರು ಬಹುತೇಕ ಬಾರಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಭಾವಿ ಆಟಗಾರ (ಇಂಪ್ಯಾಕ್ಟ್‌ ಪ್ಲೇಯರ್) ನಿಯಮವೂ ಪಂದ್ಯಗಳಲ್ಲಿ ರೋಚಕತೆಯನ್ನು ಹುಟ್ಟುಹಾಕುತ್ತಿದೆ. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಮತ್ತು ಲಖನೌ ಸೂಪರ್ ಜೈಂಟ್ಸ್ ಪಂದ್ಯವು ರೋಚಕ ಅಂತ್ಯ ಕಂಡಿತ್ತು. ಬೆಂಗಳೂರು ನೀಡಿದ್ದ ಬೃಹತ್ ಗುರಿಯನ್ನು ಬೆನ್ನಟ್ಟಿದ್ದ ಲಖನೌ ತಂಡದ ಗೆಲುವಿನಲ್ಲಿ ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೊಲಸ್ ಪೂರನ್ ಅವರ ಬ್ಯಾಟಿಂಗ್ ಪ್ರಮುಖವಾಗಿತ್ತು ನಿಜ. ಆ ತಂಡದ ಇಂಪ್ಯಾಕ್ಟ್ ಪ್ಲೆಯರ್ ಆಯುಷ್ ಬಡೋಣಿಯ 30 ರನ್‌ಗಳೂ ಕಾರಣವಾಗಿದ್ದವು. ಅಲ್ಲದೇ ಆ ಪಂದ್ಯದ ಮಧ್ಯದಲ್ಲಿ ಆರ್‌ಸಿಬಿಯ ಇಂಪ್ಯಾಕ್ಟ್ ಪ್ಲೇಯರ್ ಸ್ಪಿನ್ನರ್ ಕರಣ್ ಶರ್ಮಾ ಆಟವೂ ಗಮನ ಸೆಳೆದಿತ್ತು. ಅಲ್ಲದೇ ವೈಡ್ ಬಾಲ್ ಮತ್ತು ನೋಬಾಲ್‌ಗಳ ಅಂಪೈರ್ ತೀರ್ಪು ಮರುಪರಿಶೀಲನೆಗೆ (ಯುಡಿಆರ್‌ಎಸ್) ಅವಕಾಶ ಕೊಡಲಾಗಿದೆ. ನಿಗದಿಯತ ಅವಧಿಯೊಳಗೆ ಓವರ್‌ಗಳನ್ನು ಮುಗಿಸದಿದ್ದರೆ ನಾಯಕನಿಗೆ ದಂಡ ವಿಧಿಸಲಾಗುತ್ತಿದೆ. ಮೂರನೆಯದಾಗಿ, ಈ ಎಲ್ಲ ಅಂಶಗಳ ಜೊತೆಗೆ ಅನುಭವಿ ಹಾಗೂ ಉದಯೋನ್ಮುಖ ಆಟಗಾರರ ನಡುವಣ ‍ಪೈಪೋಟಿ ಮುಗಿಲು ಮುಟ್ಟಿದೆ. ಭಾರತ ತಂಡಕ್ಕೆ ಮರಳಲು ಯತ್ನಿಸುತ್ತಿರುವ ಶಿಖರ್ ಧವನ್ ಅವರ 99 ರನ್‌ಗಳ ಸಮಚಿತ್ತದ ಆಟ, ಅಜಿಂಕ್ಯ ರಹಾನೆಯ ಅಬ್ಬರ, ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ, ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಕೇಂದ್ರಬಿಂದುವೇ ಆಗಿರುವ ಧೋನಿ ಹೀಗೆ ಪಟ್ಟಿ ಬೆಳೆಯುತ್ತದೆ. ಕೊಹ್ಲಿ ಎರಡು ಶತಕ ಹೊಡೆದರೆ, ಯುವಪ್ರತಿಭೆ ಶುಭಮನ್ ಗಿಲ್ ಕೂಡ ಎರಡು ಶತಕಗಳ ಸಂಭ್ರಮ ಆಚರಿಸಿದರು. ಯುವಪ್ರತಿಭೆಗಳಾದ ಋತುರಾಜ್ ಗಾಯಕವಾಡ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸಾಯಿ ಸುದರ್ಶನ್, ಸ್ಪಿನ್ನರ್ ಸುಯಶ್ ಶರ್ಮಾ ಸೇರಿದಂತೆ ಹಲವು ಆಟಗಾರರು ಗಮನ ಸೆಳೆದರು. ಆದ್ದರಿಂದಲೇ ಇವರನ್ನು ಹತ್ತಿರದಿಂದ ನೋಡಲು ಹಾಗೂ ಅವಕಾಶ ಸಿಕ್ಕರೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕ್ರೀಡಾಂಗಣಗಳಿಗೂ ಜನರು ಲಗ್ಗೆ ಇಟ್ಟರು. ಮೂರು ವರ್ಷಗಳ ನಂತರ ಪಂದ್ಯಗಳು ತವರು ಹಾಗೂ ತವರಿನಾಚೆ (ಹೋಮ್ ಅ್ಯಂಡ್ ಅವೇ) ಮಾದರಿಗೆ ಮರಳಿದವು. ಕೋವಿಡ್ ಕಾರಣದಿಂದಾಗಿ ಕಳೆದ ಮೂರು ಆವೃತ್ತಿಗಳಲ್ಲಿ ಪ್ರಯಾಣಕ್ಕೆ ಅವಕಾಶ ನೀಡದೇ ತಟಸ್ಥ ತಾಣದಲ್ಲಿಯೇ ಅಯೋಜಿಸಲಾಗಿತ್ತು. ಅದರಿಂದಾಗಿ ಟಿ.ವಿ ಪ್ರಸಾರವನ್ನೇ ಜನರು ನೆಚ್ಚಿಕೊಂಡಿದ್ದರು. ಚಲನಚಿತ್ರ, ರಿಯಾಲಿಟಿ ಶೋ, ಪಬ್‌, ಕ್ಲಬ್ ಮನರಂಜನೆಗಳು ನಿತ್ಯ ಸಿಗುತ್ತವೆ. ಐಪಿಎಲ್ ವರ್ಷಕ್ಕೊಮ್ಮೆ ಎಂಬ ಭಾವನೆ ಆಳವಾಗಿ ಬೇರೂರಿದೆ. ಅಲ್ಲದೇ ಕ್ರೀಡಾಂಗಣದೊಳಗೆ ನಾಲ್ಕರಿಂದ–ಐದು ತಾಸು ಡಿಜೆ ಸಂಗೀತ, ಮತ್ತೇರಿಸುವ ಬೆಳಕಿನಾಟ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿಗಳನ್ನು ಹಂಚಿಕೊಳ್ಳುವ ಭರಾಟೆಯೂ ಅಷ್ಟಿಷ್ಟಲ್ಲ. ಇದೆಲ್ಲದರ ಲಾಭ ಸಿಕ್ಕಿದ್ದು ಕ್ರಿಕೆಟ್‌ಗೆ ಮಾತ್ರವಲ್ಲ, ಬೆಟ್ಟಿಂಗ್ ಮತ್ತು ಗೇಮಿಂಗ್ ಆ್ಯಪ್‌ಗಳ ಲೋಕಕ್ಕೂ ಆಗಿದ್ದು ಸುಳ್ಳಲ್ಲ. ಬೆಂಗಳೂರಿನಲ್ಲಿ ಮಳೆ ಸುರಿದರೂ ನಡೆದ ಪಂದ್ಯ ಮೇ 21ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ 37 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ನಿರಾಶೆಯಾಗಲಿಲ್ಲ. ಅವತ್ತು ಬೆಂಗಳೂರಿನಲ್ಲಿ ರಭಸದ ಮಳೆ ಸುರಿದಿತ್ತು. ಹಾಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯವು ನಡೆಯುವುದು ಅನುಮಾನವಾಗಿತ್ತು. ಆದರೆ ನಿಗದಿಯ ವೇಳೆಗಿಂತ ಅರ್ಧಗಂಟೆ ವಿಳಂಬವಾಗಿ ಪಂದ್ಯ ಆರಂಭವಾಯಿತು. ಪಂದ್ಯವು ಪೂರ್ಣವಾಗಿ ನಡೆಯಿತು. ಅದಕ್ಕೆ ಕಾರಣವಾಗಿದ್ದು ಕ್ರೀಡಾಂಗಣದಲ್ಲಿ ಅಳವಡಿಸಿರುವ ಸಬ್‌ ಏರ್ ಸಿಸ್ಟಮ್ ಮತ್ತು ಸಿಬ್ಬಂದಿಯ ಪರಿಶ್ರಮ. ‘ಐದು ವರ್ಷಗಳ ಹಿಂದೆಯೇ ಈ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಇಡೀ ಭಾರತದಲ್ಲಿ ಈ ವ್ಯವಸ್ಥೆ ಇರುವ ಏಕೈಕ ಕ್ರೀಡಾಂಗಣ ಇದಾಗಿದೆ. ಮಳೆ ನಿಂತ ನಂತರದ 30ರಿಂದ 45 ನಿಮಿಷಗಳಲ್ಲಿ ಮೈದಾನವು ಒಣಗಿ ಸಿದ್ಧವಾಗುತ್ತದೆ. ಆದ್ದರಿಂದ ಪಂದ್ಯ ಆಯೋಜಿಸಲು ನೆರವಾಗುತ್ತದೆ’ ಎಂದು ಕೆಎಸ್‌ಸಿಎ ಕ್ರೀಡಾಂಗಣ ಸಿಬ್ಬಂದಿ ಹೇಳುತ್ತಾರೆ. ಈ ಸಲದ ಐಪಿಎಲ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಏಳು ಪಂದ್ಯಗಳನ್ನು ಆಯೋಜಿಸಿತು. ಅದರಲ್ಲಿ ಮೊದಲ ಆರು ಪಂದ್ಯಗಳು ಏಪ್ರಿಲ್‌ ತಿಂಗಳಿನಲ್ಲಿಯೇ ನಡೆದಿದ್ದು ವಿಶೇಷ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇದ್ದ ಕಾರಣ ಏಪ್ರಿಲ್ 27ರ ನಂತರ ಪಂದ್ಯಗಳನ್ನು ನಡೆಸಲು ಅವಕಾಶವಿರಲಿಲ್ಲ. ‘ಸಬ್‌ ಏರ್‌ ವ್ಯವಸ್ಥೆಯಿಂದಾಗಿ ಅಭಿಮಾನಿಗಳಿಗೆ ಉತ್ತಮ ಪಂದ್ಯವನ್ನು ವೀಕ್ಷಿಸುವ ಅವಕಾಶ ಒದಗಿತು’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಘುರಾಮ್ ಭಟ್ ಸಂತಸ ವ್ಯಕ್ತಪಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.