ನಿವೃತ್ತಿ ಬಗ್ಗೆ 8–9 ತಿಂಗಳಲ್ಲಿ ನಿರ್ಧಾರ: ಧೋನಿ ಚೆನ್ನೈ: ಈ ಬಾರಿಯ ಐಪಿಎಲ್‌ ಟೂರ್ನಿಯು ಮಹೇಂದ್ರ ಸಿಂಗ್‌ ಧೋನಿ ಅವರ ಪಾಲಿಗೆ ಕೊನೆಯದ್ದು ಎಂಬ ಮಾತುಗಳು ಲೀಗ್‌ನ ಆರಂಭದಿಂದಲೇ ಕೇಳಿಬರುತ್ತಿತ್ತು. ಆದರೆ ನಿವೃತ್ತಿಯ ಬಗ್ಗೆ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಧೋನಿ ಅವರು ಮಂಗಳವಾರ ರಾತ್ರಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ದಾಖಲೆಯ 10ನೇ ಬಾರಿ ಫೈನಲ್‌ಗೆ ಮುನ್ನಡೆಸಿದ್ದರು. ಚೆನ್ನೈ ತಂಡ ‘ಕ್ವಾಲಿಫೈಯರ್‌–1’ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನು 15 ರನ್‌ಗಳಿಂದ ಮಣಿಸಿತ್ತು. ಪಂದ್ಯದ ಬಳಿಕ ಮಾತನಾಡಿದ ಅವರು, ‘ಮುಂದಿನ ಐಪಿಎಲ್‌ ಟೂರ್ನಿಯ ಹರಾಜು ಪ್ರಕ್ರಿಯೆ ಡಿಸೆಂಬರ್‌ನಲ್ಲಿ ನಡೆಯಲಿದೆ. ನಿವೃತ್ತಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು 8–9 ತಿಂಗಳುಗಳ ಕಾಲಾವಕಾಶ ಇದೆ. ನಿವೃತ್ತಿಯಾಗಬೇಕೇ, ಬೇಡವೇ ಎಂಬುದರ ಬಗ್ಗೆ ಈಗಲೇ ಏಕೆ ತಲೆಕೆಡಿಸಿಕೊಳ್ಳಲಿ? ಸದ್ಯಕ್ಕೆ ಆ ಬಗ್ಗೆ ಏನೂ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ‘ನಾನು ಯಾವಾಗಲೂ ಸಿಎಸ್‌ಕೆ ಜತೆಗೇ ಇರುತ್ತೇನೆ. ಆದರೆ ಆಟಗಾರನಾಗಿ ಇರುತ್ತೇನೆಯೇ, ಆಥವಾ ಬೇರೆ ಯಾವುದಾದರೂ ಹುದ್ದೆಯನ್ನು ವಹಿಸಿಕೊಂಡಿರುವೆನೇ ಎಂಬುದು ನಿಜವಾಗಿಯೂ ಗೊತ್ತಿಲ್ಲ’ ಎಂದಿದ್ದಾರೆ. ‘ನಾನು ಸಾಕಷ್ಟು ದಣಿದಿದ್ದೇನೆ ಎಂಬುದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳುತ್ತೇನೆ. ಸುಮಾರು ನಾಲ್ಕು ತಿಂಗಳುಗಳಿಂದ ಮನೆಯಿಂದ ಹೊರಗಿದ್ದೇನೆ. ಜನವರಿ 31 ರಂದು ಮನೆಯನ್ನು ಬಿಟ್ಟು, ಚೆನ್ನೈ ತಂಡವನ್ನು ಸೇರಿಕೊಂಡಿದ್ದೆ. ಐಪಿಎಲ್‌ಗಾಗಿ ಮಾರ್ಚ್‌ ಎರಡನೇ ವಾರದಿಂದ ಅಭ್ಯಾಸ ಆರಂಭಿಸಿದ್ದೆ. ಸತತ ಅಭ್ಯಾಸ ಮತ್ತು ಪಂದ್ಯಗಳಿಂದಾಗಿ ಆಯಾಸಗೊಂಡಿದ್ದೇನೆ. ಆದರೂ ನಿವೃತ್ತಿಯ ಬಗ್ಗೆ ನಿರ್ಧರಿಸಲು ಸಾಕಷ್ಟು ಸಮಯ ಇದೆ’ ಎಂದು ಸ್ಪಷ್ಟಪಡಿಸಿದರು. 41 ವರ್ಷದ ಧೋನಿ, ಮಂಡಿಯ ನೋವು ಲೆಕ್ಕಿಸದೆಯೇ ಈ ಬಾರಿ ಅಡುತ್ತಿದ್ದಾರೆ. 15 ಪಂದ್ಯಗಳಿಂದ ಅವರು 34.67ರ ಸರಾಸರಿಯಲ್ಲಿ 104 ರನ್‌ ಮಾತ್ರ ಗಳಿಸಿದ್ದಾರೆ. ಫಿಟ್‌ನೆಸ್‌ ಸಮಸ್ಯೆಯಿದ್ದರೂ ಈ ಋತುವಿನ ಎಲ್ಲ ಪಂದ್ಯಗಳನ್ನು ಆಡಿದ್ದಾರೆ. ‘ಕಿರಿಕಿರಿ’ ಉಂಟುಮಾಡುವ ನಾಯಕ: ‘ಫೀಲ್ಡಿಂಗ್‌ನಲ್ಲಿ ಪದೇ ಪದೇ ಬದಲಾವಣೆ ತರುವುದರಿಂದ ಸಹ ಆಟಗಾರರ ಪಾಲಿಗೆ ನಾನೊಬ್ಬ ಕಿರಿಕಿರಿ ಉಂಟುಮಾಡುವ ನಾಯಕ ಎನಿಸಿದ್ದೇನೆ’ ಎಂದು ಧೋನಿ ಹೇಳಿದರು. ‘ಆಟದ ಪರಿಸ್ಥಿತಿಗೆ ತಕ್ಕಂತೆ ಕ್ಷೇತ್ರರಕ್ಷಣೆಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ನನ್ನ ಮೇಲೂ ಕಣ್ಣಿಟ್ಟಿರಬೇಕು ಎಂದು ಫೀಲ್ಡರ್‌ಗಳಿಗೆ ಹೇಳುತ್ತಿರುತ್ತೇನೆ. ಇದು ಅವರಿಗೆ ಕಿರಿಕಿರಿ ಉಂಟುಮಾಡಬಹುದು. ಆದರೆ ನಾನು ಪೂರ್ಣ ವಿಶ್ವಾಸವನ್ನಿಟ್ಟುಕೊಂಡೇ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದರು. ‘ಎಲ್ಲ ಆಟಗಾರರ ಎರಡು ತಿಂಗಳಿಗೂ ಹೆಚ್ಚಿನ ಅವಧಿಯ ಶ್ರಮದಿಂದಾಗಿ ನಾವು ಈ ಹಂತ ತಲುಪಿದ್ದೇವೆ. ತಂಡದ ಯಶಸ್ಸಿನಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಇದೆ’ ಎಂದು ನುಡಿದರು. ‘15 ರನ್ ಹೆಚ್ಚುವರಿಯಾಗಿ ಕೊಟ್ಟೆವು’ ‘ಬೌಲರ್‌ಗಳು ಕೆಲವೊಂದು ಕೆಟ್ಟ ಎಸೆತಗಳನ್ನು ಹಾಕಿದ್ದರಿಂದ ನಾವು ಎದುರಾಳಿಗಳಿಗೆ ಹೆಚ್ಚುವರಿಯಾಗಿ 15 ರನ್‌ಗಳನ್ನು ಬಿಟ್ಟುಕೊಟ್ಟೆವು. ಅದು ಮುಳುವಾಗಿ ಪರಿಣಮಿಸಿತು’ ಎಂದು ಗುಜರಾತ್‌ ಟೈಟನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ. ‘ಹೆಚ್ಚಿನ ಓವರ್‌ಗಳಲ್ಲಿ ಬಿಗುವಾದ ದಾಳಿ ಮಾಡಿದ್ದೇವೆ. ಅದರ ನಡುವೆ ಕೆಲವೊಂದು ಕೆಟ್ಟ ಎಸೆತಗಳನ್ನೂ ಹಾಕಿದ್ದರಿಂದ ಒಂದಷ್ಟು ರನ್‌ಗಳು ಸೋರಿಹೋದವು’ ಎಂದರು. ಗುಜರಾತ್‌ ತಂಡ ಕೊನೆಯ ಮೂರು ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.