ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಹಣ ಗೆದ್ದ ಯುವಕನ ಭೀಕರ ಕೊಲೆ– ಮದ್ದೂರಲ್ಲಿ ಘಟನೆ‌ ಮದ್ದೂರು (ಮಂಡ್ಯ ಜಿಲ್ಲೆ): ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಗೆದ್ದ ಹಣ ನೀಡುವ ಸಂಬಂಧ ಗಲಾಟೆಯಾಗಿ ಸ್ನೇಹಿತರ ಗುಂಪೊಂದು ಹಣ ಗೆದ್ದ ಯುವಕನೊಬ್ಬನನ್ನು ಸೌದೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಬೋರಾಪುರ ಸಮೀಪದ ವಿ.ಸಿ ನಾಲೆ ಬಳಿ ಗುರುವಾರ ರಾತ್ರಿ ನಡೆದಿದೆ. ಚಿಕ್ಕರಸಿನಕೆರೆ ಗ್ರಾಮದ ಪುನೀತ್ (28) ಬೆಟ್ಟಿಂಗ್ ಹಾವಳಿಗೆ ಬಲಿಯಾಗಿದ್ದಾರೆ. ಪುನೀತ್‌ ಐಪಿಎಲ್‌ ಪಂದ್ಯಗಳು ಆರಂಭವಾದಾಗಿನಿಂದ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು. ಸೀಸನ್‌ ಆರಂಭವಾದ ದಿನದಿಂದಲೂ ಆತ ಹೆಚ್ಚು ಹಣ ಕಟ್ಟಿ ಗೆಲುವು ಕಂಡಿದ್ದರು. ಗೆದ್ದ ಹಣ ನೀಡುವಂತೆ ಬೋರಾಪುರ ಗ್ರಾಮದ ಶರತ್‌, ಮಂಜು ಅವರನ್ನು ಕೇಳಿಕೊಂಡಿದ್ದರು. ಗುರುವಾರ ರಾತ್ರಿ ಹಣ ಕೇಳಿದಾಗ ಯುವಕರ ಗುಂಪು ತಾವು ಇರುವಲ್ಲಿಗೆ ಬರುವಂತೆ ತಿಳಿಸಿದ್ದಾರೆ. ಯುವಕನೊಬ್ಬನನ್ನು ಕಳುಹಿಸಿ ಬೋರಾಪುರದಿಂದ ಹುಲಿಗೆರೆಪುರಕ್ಕೆ ಹೋಗುವ ವಿ.ಸಿ ನಾಲೆ ಬಳಿಗೆ ಕರೆಸಿಕೊಂಡಿದ್ದಾರೆ. ಹಣ ಕೊಡುವಂತೆ ಕೇಳಿದಾಗ ಯುವಕರ ಗುಂಪು ಪುನೀತ್‌ ಮೇಲೆ ಸೌದೆಯಿಂದ ತಲೆಗೆ ಹಲ್ಲೆ ಮಾಡಿದೆ. ತೀವ್ರವಾಗಿ ಗಾಯಗೊಂಡಿದ್ದ ಪುನೀತ್‌ನನ್ನು ಭಾರತೀನಗರದ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ದಾಖಲಿಸಲಾಗಿದೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆಗೆ ಸ್ಪಂದಿಸದ ಪುನೀತ್‌ ಮೃತಪಟ್ಟಿದ್ದಾರೆ. ಘಟನೆಯ ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.