2023: ಪಂಜಾಬ್‌ಗೆ ಸೋಲುಣಿಸಿದ ರಾಜಸ್ಥಾನ ರಾಯಲ್ಸ್ ಧರ್ಮಶಾಲಾ: ರಾಜಸ್ಥಾನ ರಾಯಲ್ಸ್‌ ತಂಡದವರು ಪಂಜಾಬ್‌ ತಂಡವನ್ನು ಮಣಿಸಿ, ಐಪಿಎಲ್‌ ಟೂರ್ನಿಯಲ್ಲಿ ‘ಪ್ಲೇ ಆಫ್‌’ ಪ್ರವೇಶಿಸುವ ಅಲ್ಪ ಸಾಧ್ಯತೆಯನ್ನು ಜೀವಂತವಾಗಿ ಇರಿಸಿಕೊಂಡರು. ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಬಳಗ ನಾಲ್ಕು ವಿಕೆಟ್‌ಗಳಿಂದ ಗೆದ್ದಿತು. ಸೋಲು ಅನುಭವಿಸಿದ ಶಿಖರ್‌ ಧವನ್‌ ಬಳಗ ಟೂರ್ನಿಯಿಂದ ಹೊರಬಿದ್ದಿತು. ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 187 ರನ್‌ ಗಳಿಸಿದರೆ, ರಾಜಸ್ಥಾನ ತಂಡ ಎರಡು ಎಸೆತಗಳು ಇರುವಂತೆಯೇ ಆರು ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. ಲೀಗ್‌ ವ್ಯವಹಾರ ಕೊನೆಗೊಳಿಸಿದ ರಾಜಸ್ಥಾನ ತಂಡ ಐದನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡ ತನ್ನ ಕೊನೆಯ ಪಂದ್ಯದಲ್ಲಿ ದೊಡ್ಡ ಅಂತರದಿಂದ ಸೋತರೆ ಮಾತ್ರ ರಾಜಸ್ಥಾನ ತಂಡ ‘ಪ್ಲೇ ಆಫ್‌’ಗೆ ಅರ್ಹತೆ ಪಡೆಯಬಹುದು. ಅರ್ಧಶತಕಗಳನ್ನು ಗಳಿಸಿದ ಯಶಸ್ವಿ ಜೈಸ್ವಾಲ್‌ (50, 36 ಎ.), ದೇವದತ್ತ ಪಡಿಕ್ಕಲ್ (51 ರನ್‌, 30 ಎ.) ಮತ್ತು ಕೊನೆಯಲ್ಲಿ ಬೀಸಾಟವಾಡಿದ ಶಿಮ್ರೊನ್‌ ಹೆಟ್ಮಯೆರ್‌ (46 ರನ್‌, 28 ಎ.) ಅವರು ರಾಯಲ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸವಾಲಿನ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ, ಜೋಸ್‌ ಬಟ್ಲರ್‌ (0) ಅವರನ್ನು ಬೇಗನೇ ಕಳೆದುಕೊಂಡಿತು. ಜೈಸ್ವಾಲ್‌ ಮತ್ತು ಪಡಿಕ್ಕಲ್‌ ಎರಡನೇ ವಿಕೆಟ್‌ಗೆ 73 ರನ್‌ ಸೇರಿಸಿದರು. ಪಡಿಕ್ಕಲ್‌ ಮತ್ತು ಸಂಜು ಸ್ಯಾಮ್ಸನ್‌ (2) ಅವರು ಐದು ರನ್‌ಗಳ ಅಂತರದಲ್ಲಿ ಔಟಾದರು. ಆದರೆ ಜೈಸ್ವಾಲ್‌ ಬಿರುಸಿನ ಆಟ ಮುಂದುವರಿಸಿದರು. ಕೊನೆಯಲ್ಲಿ ಹೆಟ್ಮಯೆರ್‌ ಅಬ್ಬರದ ಆಟವಾಡಿದರು. ಅವರಿಗೆ ರಿಯಾನ್‌ ಪರಾಗ್‌ (20) ತಕ್ಕ ಸಾಥ್‌ ನೀಡಿದರು. ಗೆಲುವಿಗೆ ಕೊನೆಯ 3 ಓವರ್‌ಗಳಲ್ಲಿ 33 ರನ್‌ಗಳು ಬೇಕಿದ್ದವು. ಕಗಿಸೊ ರಬಾಡ ಬೌಲ್‌ ಮಾಡಿದ 18ನೇ ಓವರ್‌ನಲ್ಲಿ ರಿಯಾನ್ ಎರಡು ಸಿಕ್ಸರ್ ಹೊಡೆದರೂ, ಆ ಓವರ್‌ನಲ್ಲಿ ಕೊನೆಯ ಎಸೆತದಲ್ಲಿ ಔಟಾದರು. ಸ್ಯಾಮ್‌ ಕರನ್‌ ಅವರ 19ನೇ ಓವರ್‌ನಲ್ಲಿ ಹೆಟ್ಮಯೆರ್ ಔಟಾದರೂ 10 ರನ್‌ಗಳು ಬಂದವು. ಸ್ಪಿನ್ನರ್‌ ರಾಹುಲ್‌ ಚಾಹರ್‌ ಬೌಲ್‌ ಮಾಡಿದ ಕೊನೆಯ ಓವರ್‌ನಲ್ಲಿ 9 ರನ್‌ಗಳು ಬೇಕಿದ್ದವು. ಮೊದಲ ಮೂರು ಎಸೆತಗಳಲ್ಲಿ 4 ರನ್‌ಗಳು ಬಂದವು. ನಾಲ್ಕನೇ ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದ ಧ್ರುವ್‌ ಜುರೆಲ್ (ಔಟಾಗದೆ 10) ಗೆಲುವು ತಂದಿತ್ತರು. ಇದಕ್ಕೂ ಮುನ್ನ ಆರಂಭಿಕ ಆಘಾತದ ನಂತರ ಚೇತರಿಸಿಕೊಂಡ ಪಂಜಾಬ್ ಕಿಂಗ್ಸ್ ಹೋರಾಟದ ಮೊತ್ತ ಗಳಿಸಿತು. ಸ್ಯಾಮ್ ಕರನ್ (ಔಟಾಗದೆ 49), ಜಿತೇಶ್ ಶರ್ಮಾ (44; 28ಎ) ಹಾಗೂ ಶಾರೂಕ್ ಖಾನ್ (41, 23ಎ) ಅವರು ಉಪಯುಕ್ತ ಕಾಣಿಕೆ ನೀಡಿದರು. ಮಧ್ಯಮವೇಗಿ ನವದೀಪ್ ಸೈನಿ (40ಕ್ಕೆ3) ಮತ್ತು ಟ್ರೆಂಟ್ ಬೌಲ್ಟ್ ದಾಳಿಯಿಂದಾಗಿ ರಾಜಸ್ಥಾನ ತಂಡವು 50 ರನ್‌ಗಳಿಗೇ ನಾಲ್ಕು ವಿಕೆಟ್ ಕಳೆದುಕೊಂಡಿತು. ಸೈನಿಯ ಸ್ವಿಂಗ್ ಎಸೆತಗಳ ಮುಂದೆ ಅಥರ್ವ ತೈಡೆ, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಶರ್ಮಾ ಔಟಾದರು. ಲಿವಿಂಗ್‌ಸ್ಟೋನ್ ಔಟಾದ ನಂತರ ಜೊತೆಗೂಡಿದ ಜಿತೇಶ್ ಹಾಗೂ ಸ್ಯಾಮ್ ಕರನ್ ಐದನೇ ವಿಕೆಟ್ ಜೊತೆಯಾಟದಲ್ಲಿ 64 ರನ್‌ ಸೇರಿಸಿದರು. ಸ್ಯಾಮ್ ಅವರ ಜೊತೆಗೂಡಿದ ಶಾರೂಕ್ ಖಾನ್ ರನ್‌ಗಳಿಕೆಯ ವೇಗಕ್ಕೆ ಒತ್ತು ನೀಡಿದರು. ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 73 ರನ್‌ ಸೇರಿಸಿದರು. ಶಾರೂಕ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ ಬಾರಿಸಿದರು. ಸ್ಯಾಮ್ 31 ಎಸೆತಗಳನ್ನು ಆಡಿದರು. ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ ಹೊಡೆದರು. ರಾಜಸ್ಥಾನ ತಂಡದ ಐದು ಬೌಲರ್‌ಗಳಲ್ಲಿ ಸ್ಪಿನ್ನರ್ ಆ್ಯಡಂ ಜಂಪಾ ನಾಲ್ಕು ಓವರ್‌ಗಳಲ್ಲಿ 26 ರನ್‌ ಬಿಟ್ಟುಕೊಟ್ಟರು. ಕಡಿಮೆ ರನ್‌ ನೀಡಿದ ಬೌಲರ್ ಆದರು. ಆದರೆ ಉಳಿದ ಬೌಲರ್‌ಗಳು ದುಬಾರಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.