ಬಿಸಿಸಿಐನಲ್ಲಿ ಲೈಂಗಿಕ ದೌರ್ಜನ್ಯ ತಡೆ ನೀತಿಗೆ ಅನುಮೋದನೆ ಸಾಧ್ಯ ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಲೈಂಗಿಕ ದೌರ್ಜನ್ಯ ತಡೆ ನೀತಿಗೆ ಇದೇ 27ರಂದು ನಡೆಯಲಿರುವ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಲಭಿಸುವುದು ಬಹುತೇಕ ಖಚಿತವಾಗಿದೆ. ಅಹಮದಾಬಾದಿನಲ್ಲಿ ಈ ಸಭೆ ನಡೆಯಲಿದೆ. ಇದಲ್ಲದೇ ಇದೇ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಕಾರ್ಯಪಡೆಯನ್ನು ಈ ಸಭೆಯಲ್ಲಿ ರೂಪಿಸಲಾಗುವುದು. ಎಂದು ಮೂಲಗಳು ತಿಳಿಸಿವೆ. ’ಮೂಲಸೌಕರ್ಯ ಅಭಿವೃದ್ಧಿ, ಸಬ್ಸಿಡಿ ಉಪಸಮಿತಿ, ರಾಜ್ಯ ತಂಡಗಳಿಗೆ ಫಿಸಿಯೊಥೆರಪಿಸ್ಟ್ ಮತ್ತು ಟ್ರೇನರ್‌ಗಳ ನೇಮಕ, ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಸಮಿತಿ ರಚನೆ, ಲೈಂಗಿಕ ದೌರ್ಜನ್ಯ ತಡೆ ನೀತಿ (ಪಿಒಎಸ್‌ಎಚ್) ಜಾರಿ ಕುರಿತು ಚರ್ಚಿಸಲಾಗುವುದು ಎಂದು ಸಭೆಯ ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ‘ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಬಿಸಿಸಿಐಗೆ ಸಿಇಒ ಆಗಿದ್ದ ರಾಹುಲ್ ಜೊಹ್ರಿ ಅವರು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ದೂರು ದಾಖಲಾಗಿತ್ತು. ಅವರ ವಿಚಾರಣೆಯೂ ನಡೆದಿತ್ತು. ಆ ಸಂದರ್ಭದಲ್ಲಿ ನಾಲ್ಕು ಸದಸ್ಯರಿದ್ದ ಆಂತರಿಕ ಅಹವಾಲು ಸಮಿತಿಯನ್ನು ನೇಮಕ ಮಾಡಲಾಗಿತ್ತು. ಇದೀಗ ಹೊಸ ನೀತಿ ಬರಲಿದ್ದು ಸಮಿತಿಯಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ರಾಜ್ಯ ತಂಡಗಳಿಗೆ ಟ್ರೇನರ್ ಹಾಗೂ ಫಿಸಿಯೊಗಳ ನೇಮಕ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಪ್ರಮಾಣಪತ್ರ ಪಡೆದ ನೆರವು ಸಿಬ್ಬಂದಿಯನ್ನು ದೇಶಿ ತಂಡಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ಇದರಿಂದಾಗಿ ಆಟಗಾರರ ಗಾಯದ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಸಾಧ್ಯವಾಗಲಿದೆ ಎನ್ನಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.