: 5ನೇ ಬಾರಿಗೆ ಟ್ರೋಫಿ ಗೆದ್ದ ಚೆನ್ನೈ ಅಹಮದಾಬಾದ್: ಐಪಿಎಲ್ 2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಮಗದೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ. ಅಲ್ಲದೆ ಒಟ್ಟಾರೆಯಾಗಿ ಚೆನ್ನೈ 10ನೇ ಬಾರಿ ಫೈನಲ್‌ಗೇರಿದ ಸಾಧನೆ ಮಾಡಿದೆ. ಈ ಮೂಲಕ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. 2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮಣಿದಿದ್ದ ಚೆನ್ನೈ ರನ್ನರ್-ಅಪ್ ಎನಿಸಿಕೊಂಡಿತ್ತು. ಧೋನಿ ನಾಯಕತ್ವದಲ್ಲೇ 2010ರಲ್ಲಿ ಚೆನ್ನೈ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿತ್ತು. 2011ರಲ್ಲೂ ಪ್ರಶಸ್ತಿ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದಿತ್ತು. 2012, 2013 ಹಾಗೂ 2015ನೇ ಸಾಲಿನಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿತ್ತು. ಬಳಿಕ ಎರಡು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ, 2018ರಲ್ಲಿ ಮತ್ತೆ ಚಾಂಪಿಯನ್ ಆಗಿತ್ತು. 2019ರಲ್ಲಿ ರನ್ನರ್-ಅಪ್ ಆದ ಚೆನ್ನೈ 2021ರಲ್ಲಿ ಟ್ರೋಫಿ ಮುಡಿಗೇರಿಸಿತ್ತು. ಧೋನಿ ನಾಯಕತ್ವದಲ್ಲಿ ಈಗ ಚೆನ್ನೈ ಐದನೇ ಬಾರಿಗೆ ಕಿರೀಟ ಗೆದ್ದಿದೆ. ಐಪಿಎಲ್ ಟ್ರೋಫಿ ವಿಜೇತ ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ: 2008: ರಾಜಸ್ಥಾನ ರಾಯಲ್ಸ್ 2009: ಡೆಕ್ಕನ್ ಚಾರ್ಜರ್ಸ್ 2010: ಚೆನ್ನೈ ಸೂಪರ್ ಕಿಂಗ್ಸ್ 2011: ಚೆನ್ನೈ ಸೂಪರ್ ಕಿಂಗ್ಸ್ 2012: ಕೋಲ್ಕತ್ತ ನೈಟ್ ರೈಡರ್ಸ್ 2013: ಮುಂಬೈ ಇಂಡಿಯನ್ಸ್ 2014: ಕೋಲ್ಕತ್ತ ನೈಟ್ ರೈಡರ್ಸ್ 2015: ಮುಂಬೈ ಇಂಡಿಯನ್ಸ್ 2016: ಸನ್‌ರೈಸರ್ಸ್ ಹೈದರಾಬಾದ್ 2017: ಮುಂಬೈ ಇಂಡಿಯನ್ಸ್ 2018: ಚೆನ್ನೈ ಸೂಪರ್ ಕಿಂಗ್ಸ್ 2019: ಮುಂಬೈ ಇಂಡಿಯನ್ಸ್ 2020: ಮುಂಬೈ ಇಂಡಿಯನ್ಸ್ 2021: ಚೆನ್ನೈ ಸೂಪರ್ ಕಿಂಗ್ಸ್ 2022: ಗುಜರಾತ್ ಟೈಟನ್ಸ್ 2023: ಚೆನ್ನೈ ಸೂಪರ್ ಕಿಂಗ್ಸ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.