ವಿಂಡೀಸ್‌ ಟೆಸ್ಟ್‌ ಸರಣಿ ನಂತರ ನಿರ್ಧಾರ ಸಾಧ್ಯತೆ:ರೋಹಿತ್‌ ನಾಯಕತ್ವಕ್ಕೆ ಕೊಕ್? ನವದೆಹಲಿ (ಪಿಟಿಐ): ಮುಂದಿನ ತಿಂಗಳು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಗೆ ಭಾರತ ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸುವ ಸಾಧ್ಯತೆಯಿದೆ. ಆದರೆ ವಿಂಡೀಸ್‌ ಪ್ರವಾಸದ ಬಳಿಕ ಅವರು ನಾಯಕತ್ವದಲ್ಲಿ ಮುಂದುವರಿಯುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಟೆಸ್ಟ್‌ ತಂಡದ ನಾಯಕ ಸ್ಥಾನದಲ್ಲಿ ಇನ್ನಷ್ಟು ಅವಧಿಗೆ ಮುಂದುವರಿಯಬೇಕಾದರೆ, ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುವ ಅನಿವಾರ್ಯತೆ ಅವರ ಮುಂದಿದೆ. ’ಜುಲೈ 12 ರಂದು ಡೊಮಿನಿಕಾದಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ದೂರವಿರಲು ರೋಹಿತ್ ನಿರ್ಧರಿಸದಿದ್ದರೆ, ತಂಡವನ್ನು ಅವರೇ ಮುನ್ನಡೆಸುವರು’ ಎಂದು ಭಾರತ ತಂಡದಲ್ಲಿನ ಬೆಳವಣಿಗೆಗಳನ್ನು ಬಲ್ಲ ಮೂಲಗಳು ತಿಳಿಸಿವೆ. ಆದರೆ ಡೊಮಿನಿಕಾ ಮತ್ತು ಟ್ರಿನಿಡಾಡ್‌ನಲ್ಲಿ ನಡೆಯಲಿರುವ ಟೆಸ್ಟ್‌ ಪಂದ್ಯಗಳಲ್ಲಿ ರೋಹಿತ್‌ ದೊಡ್ಡ ಮೊತ್ತ ಗಳಿಸದಿದ್ದರೆ, ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕಾದ ಒತ್ತಡಕ್ಕೆ ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿಯು ಸಿಲುಕಲಿದೆ ಎನ್ನಲಾಗಿದೆ. ‘ರೋಹಿತ್ ಅವರನ್ನು ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿಸಲಾಗುತ್ತಿದೆ ಎಂಬುದು ಆಧಾರರಹಿತ ಮಾತು. ಆದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಮುಂಬರುವ ಆವೃತ್ತಿ 2025 ರಲ್ಲಿ ಕೊನೆಗೊಳ್ಳುವ ವೇಳೆಗೆ ಅವರಿಗೆ 38 ವರ್ಷವಾಗಿರುತ್ತದೆ. ಮುಂಬರುವ ಇಡೀ ಆವೃತ್ತಿಯಲ್ಲಿ (ಎರಡು ವರ್ಷ) ತಂಡವನ್ನು ಮುನ್ನಡೆಸಲು ಸಾಮರ್ಥ್ಯ ಅವರಿಗೆ ಇದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ’ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ. ‘ವೆಸ್ಟ್‌ ಇಂಡೀಸ್‌ನಲ್ಲಿ ತೋರುವ ಬ್ಯಾಟಿಂಗ್ ಪ್ರದರ್ಶನದ ಆಧಾರದಲ್ಲಿ ಆಯ್ಕೆ ಸಮಿತಿಯು ರೋಹಿತ್‌ ಅವರನ್ನು ನಾಯಕತ್ವದಲ್ಲಿ ಮುಂದುವರಿಸುವ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ’ ಎಂದು ಹೇಳಿವೆ.‌ ರೋಹಿತ್‌ ಅವರು 2022 ರಲ್ಲಿ ಟೆಸ್ಟ್‌ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ಒಟ್ಟು 10 ಪಂದ್ಯಗಳನ್ನು ಆಡಿದೆ. ಇದರಲ್ಲಿ ಮೂರು ಪಂದ್ಯಗಳಲ್ಲಿ ರೋಹಿತ್‌ ಕಣಕ್ಕಿಳಿದಿರಲಿಲ್ಲ. ಏಳು ಟೆಸ್ಟ್‌ಗಳಲ್ಲಿ ಅವರು 35.45ರ ಸರಾಸರಿಯಲ್ಲಿ 390 ರನ್‌ ಗಳಿಸಿದ್ದಾರೆ. 11 ಇನಿಂಗ್ಸ್‌ಗಳಲ್ಲಿ ಒಂದು ಶತಕ ಮಾತ್ರ ಹೊಡೆದಿದ್ದಾರೆ. ಇನ್ನುಳಿದ ಇನಿಂಗ್ಸ್‌ಗಳಲ್ಲಿ 50ಕ್ಕಿಂತ ಹೆಚ್ಚಿನ ಮೊತ್ತ ಪೇರಿಸಿಲ್ಲ. ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳಾಪಟ್ಟಿ: ಜುಲೈ 12–16: ಮೊದಲ ಟೆಸ್ಟ್‌ (ಡೊಮಿನಿಕಾ) ಜುಲೈ 20–24: ಎರಡನೇ ಟೆಸ್ಟ್‌ (ಟ್ರಿನಿಡಾಡ್‌) ಮೂರು ಏಕದಿನ ಪಂದ್ಯಗಳು: ಜುಲೈ 27 (ಬಾರ್ಬೆಡಸ್), ಜುಲೈ 29 (ಬಾರ್ಬೆಡಸ್), ಆ.1 (ಟ್ರಿನಿಡಾಡ್) ಐದು ಟಿ20 ಪಂದ್ಯಗಳು: ಆ.3 (ಟ್ರಿನಿಡಾಡ್‌), ಆ.6 (ಗಯಾನ), ಆ.8 (ಗಯಾನ), ಆ.12 (ಲಾಡೆರ್‌ಹಿಲ್‌, ಅಮೆರಿಕ), ಆ. 13 (ಲಾಡೆರ್‌ಹಿಲ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.