ಮಹಿಳಾ ಆ್ಯಷಸ್ ಸರಣಿಯ ಮೊದಲ ಟೆಸ್ಟ್‌: ಪೆರಿ, ತಹಿಲಾ ಶತಕದ ಜೊತೆಯಾಟ ನಾಟಿಂಗ್‌ಹ್ಯಾಮ್ (ಎಎಫ್‌ಪಿ): ಕೇವಲ ಒಂದು ರನ್‌ ಅಂತರದಿಂದ ಶತಕ ಕೈತಪ್ಪಿಸಿಕೊಂಡ ಎಲೀಸ್ ಪೆರಿ ಅವರ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು ಮಹಿಳಾ ಆ್ಯಷಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಉತ್ತಮ ಆರಂಭ ಮಾಡಿದೆ. ಟ್ರೆಂಟ್‌ಬ್ರಿಡ್ಜ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ವನಿತೆಯರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಎಲಿಸ್ ಪೆರಿ (99; 153ಎ, 4X15) ಹಾಗೂ ತಹಿಲಾ (61; 83ಎ, 4X8) ಅವರ ಆಟದ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 64 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 249 ರನ್‌ ಗಳಿಸಿತು. ಆಸ್ಟ್ರೇಲಿಯಾ ತಂಡಕ್ಕೆ ಬೆಥ್ ಮೂನಿ (33; 57ಎ, 4X4) ಹಾಗೂ ಪೋಬ್ ಲಿಚ್‌ಫೀಲ್ಡ್ (23; 32ಎ, 4X4) ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಆದರೆ, ಇಂಗ್ಲೆಂಡ್ ತಂಡದ ಕೇಟ್ ಕ್ರಾಸ್ ಒಂಬತ್ತನೇ ಓವರ್‌ನಲ್ಲಿ ಲಿಚ್‌ಫೀಲ್ಡ್ ವಿಕೆಟ್ ಗಳಿಸಿದರು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಪೆರಿ ಇನಿಂಗ್ಸ್ ಹೊಣೆಯನ್ನು ನಿಭಾಯಿಸಿದರು. ಅವರು ಮತ್ತು ಮೂನಿ ಎರಡನೇ ವಿಕೆಟ್ ಜೊತೆಯಾಟವನ್ನು ನಿಧಾನವಾಗಿ ಕಟ್ಟತೊಡಗಿದ್ದರು. 48 ರನ್‌ ಕೂಡ ಸೇರಿಸಿದರು. ಆದರೆ ಇಂಗ್ಲೆಂಡ್ ತಂಡದ ಲಾರೆನ್ ಫ್ಲೈಯರ್ ಬೌಲಿಂಗ್‌ನಲ್ಲಿ ಮೂನಿ ಔಟಾದರು. ಪೆರಿ ಜೊತೆಗೂಡಿದ ತಹಿಲಾ ಉಪಯುಕ್ತ ಕಾಣಿಕೆ ನೀಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 129 ರನ್‌ ಸೇರಿಸಿದರು. ಆದರೆ, ಪೆರಿ ಅವರು ಶತಕ ಪೂರೈಸಲು ಇನ್ನೊಂದು ರನ್‌ ಮಾತ್ರ ಅಗತ್ಯವಿದ್ದಾಗ ಔಟಾದರು. ಲಾರೆನ್ ಫ್ಲೈಯರ್ ಎಸೆತವನ್ನು ಆಡುವ ಭರದಲ್ಲಿ ನ್ಯಾಟ್ ಶೀವರ್‌ ಬ್ರಂಟ್‌ ಅವರಿಗೆ ಕ್ಯಾಚಿತ್ತರು. ಇಂಗ್ಲೆಂಡ್ ಬೌಲರ್ ಸೋಫಿ ಎಕ್ಸೆಲ್‌ಸ್ಟನ್ ಮೂರು ವಿಕೆಟ್ ಗಳಿಸಿ ಮಧ್ಯಮ ಕ್ರಮಾಂಕಕ್ಕೆ ಬಲವಾದ ಪೆಟ್ಟುಕೊಟ್ಟರು. ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 64 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 249 (ಬೆಥ್ ಮೂನಿ 33, ಫೋಬ್ ಲಿಚ್‌ಫೀಲ್ಡ್ 23, ಎಲೀಸ್ ಪೆರಿ 99, ತಹಿಲಾ ಮೆಕ್‌ಗ್ರಾ 61, ಸೋಫಿ ಎಕ್ಸೆಲ್‌ಸ್ಟನ್ 50ಕ್ಕೆ3, ಲಾರೆನ್ ಫ್ಲೈಯರ್ 54ಕ್ಕೆ2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.