ವಿಂಡೀಸ್‌ ಸರಣಿಗೆ ಆಯ್ಕೆಯಾದ ಮುಕೇಶ್ ಕುಮಾರ್ ಟೆಸ್ಟ್ ಕನಸು ಕೈಗೂಡುವ ಹೊತ್ತು ಕೋಲ್ಕತ್ತ (ಪಿಟಿಐ): ಬಂಗಾಳ ತಂಡದ ಮಧ್ಯಮವೇಗಿ ಮುಕೇಶ್ ಕುಮಾರ್ ಹಲವು ವರ್ಷಗಳಿಂದ ಕಂಡಿದ್ದು ಕನಸು ಈಗ ಕೈಗೂಡುವ ಕಾಲ ಬಂದಿದೆ. ವೆಸ್ಟ್ ಇಂಡೀಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ 29 ವರ್ಷದ ಮುಕೇಶ್ ಸ್ಥಾನ ಪಡೆದಿದ್ದಾರೆ. ತಮ್ಮ ಜೀವನದುದ್ದಕ್ಕೂ ಕಠಿಣ ಸವಾಲುಗಳನ್ನು ಎದುರಿಸಿ ಈ ಹಂತಕ್ಕೆ ಬಂದಿರುವ ಅಟಗಾರ. ಜೂನಿಯರ್ ಹಂತದ ಕ್ರಿಕೆಟ್ ಆಡುವಾಗಲೇ ತಂದೆಯ ನಿಧನದ ನೋವು ನುಂಗಿಕೊಂಡೇ ಮುಕೇಶ್ ಬೆಳೆದರು. ’ಟೆಸ್ಟ್ ಆಡದಿದ್ದರೆ ಏನು ಸಾಧನೆ ಮಾಡಿದರೂ ಕಮ್ಮಿಯೇ ಎನ್ನಲಾಗುತ್ತದೆ. ಇದೀಗ ನನ್ನ ವೃತ್ತಿಜೀವನ ಅರ್ಥಪೂರ್ಣವಾಗುವ ಸಮಯವಿದು. ನಾನು ಸದಾ ಕಂಡ ಕನಸು ಈಗ ನನ್ನ ಮುಂದಿದೆ. ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವುದು ಸಂತಸವಾಗಿದೆ‘ ಎಂದರು. ಮುಕೇಶ್, ಮೂಲತಃ ಬಿಹಾರದ ಗೋಪಾಲಗಂಜ್ ಜಿಲ್ಲೆಯ ಕಂಕರ್ ಕುಂದು ಕುಗ್ರಾಮದವರು. 2012ರಲ್ಲಿ ಕೋಲ್ಕತ್ತಕ್ಕೆ ಬಂದರು. ತಂದೆ ಕಾಶೀನಾಥ್ ಸಿಂಗ್ ಟ್ಯಾಕ್ಸಿ ಓಡಿಸುತ್ತಿದ್ದರು. ರಾತ್ರಿ ಹೊತ್ತಿನಲ್ಲಿ ಮುಕೇಶ್ ಈಡನ್‌ ಗಾರ್ಡನ್‌ ಸಮೀಪದ ಛತ್ರಗಳಲ್ಲಿ ಮಲಗುತ್ತಿದ್ದರು. 2019ರಲ್ಲಿ ತಂದೆ ತೀರಿಕೊಂಡರು. ತಂದೆಯ ಆಸೆ ಈಡೇರಿಸಲು ಮುಕೇಶ್, ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ನೌಕರಿ ಪಡೆಯಲು ಎರಡು ಬಾರಿ ಪ್ರವೇಶ ಪರೀಕ್ಷೆ ಬರೆದರು. ಅದೇ ಸಂದರ್ಭದಲ್ಲಿ 19 ವರ್ಷದೊಳಗಿನವರ ತಂಡದಲ್ಲಿ ಆಡುತ್ತಿದ್ದರು. ತಮ್ಮ ದಿನನಿತ್ಯದ ಖರ್ಚಿಗಾಗಿ ಹಣ ಗಳಿಸಲು ಮಾನ್ಯತೆಯಿಲ್ಲದ ಕ್ಲಬ್‌ಗಳ ತಂಡದಲ್ಲಿ ಟೆನಿಸ್‌ ಬಾಲ್ ಟೂರ್ನಿಗಳಲ್ಲಿ ಆಡುತ್ತಿದ್ದರು. ಪ್ರತಿ ಪಂದ್ಯಕ್ಕೆ ₹ 500 ರಿಂದ ₹ 5000 ಗಳಿಸುತ್ತಿದ್ದರು. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮುಕೇಶ್ ದೇಹದ ಮೂಳೆಗಳಲ್ಲಿ ಶಕ್ತಿ ಕುಂಠಿತವಾಗಿತ್ತು. ಮೊಣಗಂಟುಗಳಲ್ಲಿ ದ್ರವ ತುಂಬಿತ್ತು. ಇದರಿಂದಾಗಿ ಬಹಳಷ್ಟು ಪಂದ್ಯಗಳಿಂದ ಹೊರಗುಳಿದರು. ಆದರೆ 2014ರ ಬೇಸಿಗೆಯು ಅವರ ಪಾಲಿಗೆ ಅದೃಷ್ಟ ತಂದಿತು. ಬಂಗಾಳದ ಮಾಜಿ ಕ್ರಿಕೆಟಿಗ ರಣದೇವ್ ಬೋಸ್ ಅವರ ಕಣ್ಣಿಗೆ ಬಿದ್ದ ಮುಕೇಶ್ ಜೀವನದ ದಿಕ್ಕು ಬದಲಾಯಿತು. ಬಂಗಾಳ ಕ್ರಿಕೆಟ್ ಸಂಸ್ಥೆಯ ’ವಿಷನ್ 2020‘ ಯೋಜನೆಗೆ ಮುಕೇಶ್ ಅವರನ್ನು ಸೇರ್ಪಡೆ ಮಾಡಲು ರಣದೀಪ್ ಮತ್ತು ಆಗಿನ ಕಾರ್ಯದರ್ಶಿ ಸೌರವ್ ಗಂಗೂಲಿ ಕಾರಣರಾದರು. ಮುಕೇಶ್ ಅವರ ಎಸೆತಗಳಲ್ಲಿ ಹೆಚ್ಚು ವೇಗವಿರಲಿಲ್ಲ. ಆದರೆ, ಸುದೀರ್ಘ ಸ್ಪೆಲ್‌ಗಳನ್ನು ಬೌಲ್ ಮಾಡುವ ತಾಕತ್ತು ಇತ್ತು. ಅದನ್ನು ಗಮನಿಸಿ ಪ್ರೋತ್ಸಾಹ ನೀಡಿದರು. ಮುಂದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಕೇಶ್ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹಸ್ವಪ್ನರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.