ಆ್ಯಷಸ್ ಮೊದಲ ಟೆಸ್ಟ್‌: ಆಸ್ಟ್ರೇಲಿಯಾಕ್ಕೆ ರೋಚಕ ಜಯ ಬರ್ಮಿಂಗ್‌ಹ್ಯಾಮ್ (ಪಿಟಿಐ): ನಾಯಕ ಪ್ಯಾಟ್‌ ಕಮಿನ್ಸ್‌ ಮತ್ತು ನೇಥನ್‌ ಲಯನ್‌ ಅವರ ಛಲದ ಆಟದ ಬಲದಿಂದ ಆಸ್ಟ್ರೇಲಿಯಾ ತಂಡ, ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಎರಡು ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಎಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ 281 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಅಂತಿಮ ದಿನವಾದ ಮಂಗಳವಾರ 8 ವಿಕೆಟ್‌ ಕಳೆದುಕೊಂಡು 282 ರನ್‌ ಗಳಿಸಿ ಗೆದ್ದು ಬೀಗಿತು. ಇಂಗ್ಲೆಂಡ್‌ನ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕಮಿನ್ಸ್‌ (ಔಟಾಗದೆ 44) ಮತ್ತು ಲಯನ್‌ (ಔಟಾಗದೆ 16) ಅವರು ಮುರಿಯದ 9ನೇ ವಿಕೆಟ್‌ಗೆ 55 ರನ್‌ ಸೇರಿಸಿ ಸ್ಮರಣೀಯ ಗೆಲುವಿಗೆ ಕಾರಣರಾದರು. ಪಂದ್ಯದ ಹೆಚ್ಚಿನ ಅವಧಿಗಳಲ್ಲೂ ಮೇಲುಗೈ ಸಾಧಿಸಿದ್ದ ಬೆನ್‌ ಸ್ಟೋಕ್ಸ್‌ ಬಳಗ ಮುಖಭಂಗ ಅನುಭವಿಸಿತು. ಸ್ಟುವರ್ಟ್ ಬ್ರಾಡ್ (64ಕ್ಕೆ3) ಮತ್ತು ಒಲಿ ರಾಬಿನ್ಸನ್ (43ಕ್ಕೆ2) ಅವರ ಬೌಲಿಂಗ್‌ ಶ್ರಮ ವ್ಯರ್ಥವಾಯಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಉಸ್ಮಾನ್‌ ಖ್ವಾಜಾ (65 ರನ್‌, 197 ಎ.) ಅವರು ಎರಡನೇ ಇನಿಂಗ್ಸ್‌ನಲ್ಲೂ ಮಿಂಚಿ, ಗೆಲುವಿಗೆ ಕೊಡುಗೆ ನೀಡಿದರು. ಅಂತಿಮ ದಿನದಾಟದ ಮೊದಲ ಅವಧಿ ಮಳೆಗೆ ಆಹುತಿಯಾಯಿತು. ಆಸ್ಟ್ರೇಲಿಯಾ 3 ವಿಕೆಟ್‌ಗೆ 107 ರನ್‌ಗಳಿಂದ ಆಟ ಮುಂದುವರಿಸಿತ್ತು. ಸೋಮವಾರ ’ರಾತ್ರಿ ಕಾವಲುಗಾರ‘ನಾಗಿ ಕ್ರೀಸ್‌ನಲ್ಲಿ ಉಳಿದಿದ್ದ ಸ್ಕಾಟ್ ಬೊಲಾಂಡ್ (20; 40ಎ) ಅವರು ಉಸ್ಮಾನ್ ಜೊತೆಗೆ ಒಂದಿಷ್ಟು ಹೊತ್ತು ಇನಿಂಗ್ಸ್‌ಗೆ ಬಲ ತುಂಬಿಸಲು ಪ್ರಯತ್ನಿಸಿದರು. ಬೊಲಾಂಡ್ ವಿಕೆಟ್ ಗಳಿಸಿದ ಬ್ರಾಡ್ ಈ ಜೊತೆಯಾಟವನ್ನು ಮುರಿದರು. ಸ್ಪಿನ್ನರ್ ಮೋಯಿನ್ ಅಲಿ ಮತ್ತು ಒಲಿ ರಾಬಿನ್ಸನ್ ಅವರು ಕ್ರಮವಾಗಿ ಟ್ರಾವಿಸ್ ಹೆಡ್ ಮತ್ತು ಕ್ಯಾಮರಾನ್ ಗ್ರೀನ್ ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ ಆಸ್ಟ್ರೇಲಿಯಾದ ರನ್‌ ಗಳಿಕೆಯ ವೇಗ ಕಡಿಮೆಯಾಯಿತು. ಉಸ್ಮಾನ್‌ ಏಳನೆಯವರಾಗಿ ಔಟಾದಾಗ ಆಸ್ಟ್ರೇಲಿಯಾದ ಸ್ಕೋರ್‌ 209. ಗೆಲುವಿಗೆ ಇನ್ನೂ 72 ರನ್‌ಗಳು ಬೇಕಿದ್ದವು. ಈ ಹಂತದಲ್ಲಿ ಇಂಗ್ಲೆಂಡ್‌ ಜಯದ ಕನಸು ಕಂಡಿತ್ತು. ಆದರೆ ಕಮಿನ್ಸ್‌ ಅವರು ಆತಿಥೇಯರ ಕನಸನ್ನು ನುಚ್ಚುನೂರು ಮಾಡಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್: 78 ಓವರ್‌ಗಳಲ್ಲಿ 8ಕ್ಕೆ393, ಆಸ್ಟ್ರೇಲಿಯಾ 116.1 ಓವರ್‌ಗಳಲ್ಲಿ 386. ಎರಡನೇ ಇನಿಂಗ್ಸ್: ಇಂಗ್ಲೆಂಡ್: 66.2 ಓವರ್‌ಗಳಲ್ಲಿ 273. ಆಸ್ಟ್ರೇಲಿಯಾ:92.3 ಓವರ್‌ಗಳಲ್ಲಿ 8ಕ್ಕೆ 282 (ಉಸ್ಮಾನ್ ಖ್ವಾಜಾ 65, ಡೇವಿಡ್ ವಾರ್ನರ್ 36, ಸ್ಕಾಟ್ ಬೊಲಾಂಡ್ 20, ಟ್ರಾವಿಸ್ ಹೆಡ್ 16, ಕ್ಯಾಮರಾನ್ ಗ್ರೀನ್ 28, ಅಲೆಕ್ಸ್‌ ಕ್ಯಾರಿ 20, ಪ್ಯಾಟ್‌ ಕಮಿನ್ಸ್‌ ಔಟಾಗದೆ 44, ನೇಥನ್‌ ಲಯನ್ ಔಟಾಗದೆ 16) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 2 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.