ಏಕದಿನ ವಿಶ್ವಕಪ್‌ ಕರಡು ವೇಳಾಪಟ್ಟಿ: ಅ.15 ರಂದು ಭಾರತ–ಪಾಕ್‌ ಪಂದ್ಯ ನವದೆಹಲಿ: ಭಾರತ ತಂಡವು ಮುಂಬರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅ.8 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಪ್ರಶಸ್ತಿಯೆಡೆಗಿನ ಅಭಿಯಾನ ಆರಂಭಿಸಲಿದೆ. ವಿಶ್ವಕಪ್‌ ಟೂರ್ನಿ ಅಕ್ಟೋಬರ್‌– ನವೆಂಬರ್‌ ತಿಂಗಳಲ್ಲಿ ಭಾರತದಲ್ಲಿ ನಡೆಯಲಿದೆ. ಬಿಸಿಸಿಐ ಸಿದ್ಧಪಡಿಸಿರುವ ಕರಡು ವೇಳಾಪಟ್ಟಿಯಂತೆ ಭಾರತ– ಆಸ್ಟ್ರೇಲಿಯಾ ಪಂದ್ಯ ಅ.8 ರಂದು ಚೆನ್ನೈನಲ್ಲಿ ಆಯೋಜನೆಯಾಗಿದೆ. ಕ್ರಿಕೆಟ್‌ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿರುವ ಭಾರತ– ಪಾಕಿಸ್ತಾನ ಪಂದ್ಯ ಅ.15 ರಂದು ನಡೆಯಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ‘ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ವಿಶ್ವಕಪ್‌ ಟೂರ್ನಿಯ ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ. ಐಸಿಸಿಯು ವೇಳಾಪಟ್ಟಿಯನ್ನು ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ದೇಶಗಳ ಕ್ರಿಕೆಟ್‌ ಮಂಡಳಿಗಳಿಗೆ ಕಳುಹಿಸಿಕೊಡಲಿದೆ. ಅವರ ಅಭಿಪ್ರಾಯ ತಿಳಿದುಕೊಂಡ ಬಳಿಕ ಮುಂದಿನ ವಾರ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುವುದು’ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವರದಿ ಮಾಡಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಉದ್ಘಾಟನಾ ಪಂದ್ಯ ಅಹಮದಾಬಾದ್‌ನಲ್ಲಿ ಅ.5 ರಂದು ನಡೆಯಲಿದ್ದು, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವು ಕಳೆದ ಬಾರಿಯ ರನ್ನರ್‌ ಅಪ್‌ ನ್ಯೂಜಿಲೆಂಡ್‌ ವಿರುದ್ದ ಪೈಪೋಟಿ ನಡೆಸಲಿದೆ. ನ.19 ರಂದು ನಡೆಯಲಿರುವ ಫೈನಲ್‌ ಪಂದ್ಯಕ್ಕೂ ಅಹಮದಾಬಾದ್‌ ಆತಿಥ್ಯ ವಹಿಸಲಿದೆ. ಸೆಮಿಫೈನಲ್‌ ಪಂದ್ಯಗಳು ನ.15 ಮತ್ತು 16 ರಂದು ನಡೆಯುವ ಸಾಧ್ಯತೆಯಿದ್ದು, ತಾಣಗಳು ಇನ್ನೂ ಅಂತಿಮಗೊಂಡಿಲ್ಲ. ಆತಿಥೇಯ ಭಾರತ ತಂಡವು ತನ್ನ ಲೀಗ್‌ ಪಂದ್ಯಗಳನ್ನು ಒಂಬತ್ತು ನಗರಗಳಲ್ಲಿ ಆಡಲಿದೆ. ಐದು ತಾಣಗಳಲ್ಲಿ ಪಾಕಿಸ್ತಾನದ ಪಂದ್ಯಗಳು: ಪಾಕಿಸ್ತಾನ ತಂಡವು ಲೀಗ್‌ ಪಂದ್ಯಗಳನ್ನು ಐದು ನಗರಗಳಲ್ಲಿ ಆಡಲಿದೆ. ಅರ್ಹತಾ ಹಂತದಲ್ಲಿ ಗೆದ್ದು ಬರುವ ತಂಡಗಳನ್ನು ಅ.6 ಮತ್ತು 12 ರಂದು ಹೈದರಾಬಾದ್‌ನಲ್ಲಿ ಎದುರಿಸಲಿದೆ. ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ (ಅ.20), ಅಫ್ಗಾನಿಸ್ತಾನ (ಅ.23) ಮತ್ತು ದಕ್ಷಿಣ ಆಫ್ರಿಕಾ (ಅ.27) ವಿರುದ್ಧ ಚೆನ್ನೈನಲ್ಲಿ, ಬಾಂಗ್ಲಾದೇಶ ವಿರುದ್ಧ (ಅ.31) ಕೋಲ್ಕತ್ತದಲ್ಲಿ, ನ್ಯೂಜಿಲೆಂಡ್‌ ವಿರುದ್ದ (ನ.5) ಬೆಂಗಳೂರಿನಲ್ಲಿ ಮತ್ತು ಇಂಗ್ಲೆಂಡ್‌ ವಿರುದ್ಧ (ನ.12) ಕೋಲ್ಕತ್ತದಲ್ಲಿ ಆಡಲಿದೆ. 10 ತಂಡಗಳು ಭಾಗಿ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಳ್ಗೊಳ್ಳಲಿವೆ. ಇದರಲ್ಲಿ ಎಂಟು ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ. ಇನ್ನುಳಿದ ಎರಡು ತಂಡಗಳು ಅರ್ಹತಾ ಹಂತದಲ್ಲಿ ಗೆದ್ದು ಬರಲಿವೆ. ವಿಶ್ವಕಪ್‌ಗೆ ಇನ್ನು ನಾಲ್ಕು ತಿಂಗಳುಗಳು ಮಾತ್ರ ಇದ್ದು ವೇಳಾಪಟ್ಟಿ ಪ್ರಕಟಿಸುವುದು ಈಗಾಗಲೇ ವಿಳಂಬವಾಗಿದೆ. 2015 ಮತ್ತು 2019ರ ಟೂರ್ನಿಗಳ ವೇಳಾಪಟ್ಟಿಯನ್ನು ಒಂದು ವರ್ಷ ಮುಂಚಿತವಾಗಿಯೇ ಪ್ರಕಟಿಸಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.