ಡಬ್ಲ್ಯುಟಿಸಿ ಫೈನಲ್‌: ನಿಧಾನಗತಿ ಓವರ್ ಮಾಡಿದ್ದಕ್ಕೆ ಕ್ರಮ, ಭಾರತ ತಂಡಕ್ಕೆ ಶೇ 100 ದಂಡ ದುಬೈ: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ನಿಧಾನಗತಿಯಲ್ಲಿ ಓವರುಗಳನ್ನು ಮಾಡಿದ್ದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ದಂಡ ವಿಧಿಸಲಾಗಿದೆ. ‘ಡಬ್ಲ್ಯುಟಿಸಿ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ತಮ್ಮ ಪಾಲಿನ ಓವರುಗಳನ್ನು ಪೂರೈಸಲು ನಿಗದಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡಿವೆ. ಭಾರತ ತಂಡದ ಆಟಗಾರರಿಗೆ ಪಂದ್ಯದ ಸಂಪೂರ್ಣ ಶುಲ್ಕವನ್ನು ಮತ್ತು ಆಸ್ಟ್ರೇಲಿಯಾ ಆಟಗಾರರಿಗೆ ಪಂದ್ಯ ಶುಲ್ಕದ ಶೇ. 80 ದಂಡ ವಿಧಿಸಲಾಗಿದೆ’ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ. ‘ಐಸಿಸಿಯ 2.22 ನಿಯಮದ ಪ್ರಕಾರ, ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಆಟಗಾರರಿಗೆ ಪಂದ್ಯ ಶುಲ್ಕದ ಶೇ 20 ದಂಡ ವಿಧಿಸಲಾಗುತ್ತದೆ‘ ಎಂದು ಐಸಿಸಿ ಹೇಳಿದೆ. ಭಾರತ ತಂಡವು ನಿಗದಿಪಡಿಸಿದ ಸಮಯದಲ್ಲಿ ಐದು ಓವರ್‌ಗಳನ್ನು ಕಡಿಮೆ ಮಾಡಿದ್ದರೆ, ಆಸ್ಟ್ರೇಲಿಯಾ ತಂಡ ನಾಲ್ಕು ಓವರ್‌ಗಳನ್ನು ಕಡಿಮೆ ಮಾಡಿತ್ತು. ಫೈನಲ್‌ನಲ್ಲಿ ಅಂತಿಮ ಹನ್ನೊಂದರ ಬಳಗದಲ್ಲಿದ್ದ ಭಾರತ ತಂಡದ ಆಟಗಾರರು ಟೆಸ್ಟ್‌ ಪಂದ್ಯಕ್ಕೆ ತಲಾ ₹ 15 ಲಕ್ಷ ಸಂಭಾವನೆ ಪಡೆಯುವರು. ರಿಸರ್ವ್‌ ಆಟಗಾರರು ತಲಾ ₹ 7.5 ಲಕ್ಷ ಗಳಿಸುವರು. ಗಿಲ್‌ಗೆ ಶೇ 15 ಹೆಚ್ಚುವರಿ ದಂಡ: ಅಂಪೈರ್‌ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಭಾರತ ತಂಡದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅವರಿಗೆ ಹೆಚ್ಚುವರಿಯಾಗಿ ಶೇ 15 ದಂಡ ವಿಧಿಸಲಾಗಿದೆ. ಪಂದ್ಯದ ನಾಲ್ಕನೇ ದಿನದಾಟದಲ್ಲಿ ಗಿಲ್‌ ಅವರು ಸ್ಕಾಟ್‌ ಬೊಲಾಂಡ್‌ ಬೌಲಿಂಗ್‌ನಲ್ಲಿ ಕ್ಯಾಮೆರಾನ್‌ ಗ್ರೀನ್‌ಗೆ ಕ್ಯಾಚಿತ್ತು ಔಟಾಗಿದ್ದರು. ಆದರೆ ಗ್ರೀನ್‌ ಕ್ಯಾಚ್‌ ಪಡೆಯುವಾಗ ಚೆಂಡು ನೆಲಕ್ಕೆ ತಾಗಿದಂತೆ ಕಂಡಬಂದಿತ್ತು. ಇದರಿಂದ ಮೈದಾನದ ಅಂಪೈರ್‌ಗಳು ಮೂರನೇ ಅಂಪೈರ್‌ ಮೊರೆ ಹೋಗಿದ್ದರು. ಅದು ಕ್ಯಾಚ್‌ ಹೌದೇ ಎಂಬುದು ರಿಪ್ಲೇನಲ್ಲೂ ಸ್ಪಷ್ಟವಾಗಿರಲಿಲ್ಲ. ಟಿ.ವಿ. ಅಂಪೈರ್‌ ರಿಚರ್ಡ್‌ ಕೆಟ್ಲ್‌ಬರೋ, ಔಟ್‌ ಎಂದು ತೀರ್ಪು ನೀಡಿದ್ದರು. ದಿನದಾಟದ ಬಳಿಕ ಗಿಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಗ್ರೀನ್‌ ಕ್ಯಾಚ್‌ ಪಡೆಯುವ ಚಿತ್ರವನ್ನು ಪೋಸ್ಟ್‌ ಮಾಡಿ, ಅಂಪೈರ್‌ ತೀರ್ಪಿಗೆ ಅಸಮಾಧಾನ ಹೊರಹಾಕಿದ್ದರು. ಅಂಪೈರ್‌ ತೀರ್ಮಾನ ಟೀಕಿಸಿ, ಅಶಿಸ್ತು ತೋರಿದ್ದಕ್ಕೆ ಅವರಿಗೆ ದಂಡ ವಿಧಿಸಲಾಗಿದೆ.‌ ‘285 ರನ್‌ ಜತೆಯಾಟ ನಿರ್ಣಾಯಕ’ ಮೆಲ್ಬರ್ನ್‌ (ಪಿಟಿಐ): ಸ್ಟೀವ್‌ ಸ್ಮಿತ್‌ ಮತ್ತು ಟ್ರಾವಿಸ್‌ ಹೆಡ್‌ ನಡುವಣ 285 ರನ್‌ಗಳ ಜತೆಯಾಟವು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆ್ಯರನ್‌ ಫಿಂಚ್‌ ಅಭಿಪ್ರಾಯಪಟ್ಟಿದ್ದಾರೆ. ‘ಆಸ್ಟ್ರೇಲಿಯಾ ತಂಡ ಟೆಸ್ಟ್‌ನಲ್ಲಿ ವಿಶ್ವಚಾಂಪಿಯನ್‌ ಎನಿಸಿರುವುದು ಅಮೋಘ ಸಾಧನೆ. ಹೆಡ್‌ ಮತ್ತು ಸ್ಮಿತ್‌ ಅವರ ಜತೆಯಾಟವು ಫಲಿತಾಂಶದ ಮೇಲೆ ಪರಿಣಾಮ ಬೀರಿತು’ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.