ಸರ್ಫರಾಜ್ ಖಾನ್ ಫಿಟ್‌ನೆಸ್, ನಡವಳಿಕೆ ಸುಧಾರಣೆ ಅಗತ್ಯ: ಬಿಸಿಸಿಐ ಅಧಿಕಾರಿ ಹೇಳಿಕೆ ನವದೆಹಲಿ: ‘ಸರ್ಫರಾಜ್ ಖಾನ್ ಅವರು ತಮ್ಮ ಫಿಟ್‌ನೆಸ್‌ ಉತ್ತಮಪಡಿಸಿಕೊಳ್ಳಬೇಕು ಹಾಗೂ ಮೈದಾನದಾಚೆಯ ನಡವಳಿಕೆಯಲ್ಲಿ ಸುಧಾರಿಸಬೇಕು. ಆಗ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಗಬಹುದು’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿರುವ ತಂಡದಲ್ಲಿ ಸರ್ಫರಾಜ್ ಖಾನ್ ಅವರಿಗೆ ಅವಕಾಶ ನೀಡದಿರುವ ಕುರಿತು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದರು. ರಣಜಿ ಟ್ರೋಫಿ ಟೂರ್ನಿಗಳಲ್ಲಿ ಉತ್ತಮವಾಗಿ ಆಡಿ ರನ್‌ ಪೇರಿಸಿರುವ ಸರ್ಫರಾಜ್‌ಗೆ ಅವಕಾಶ ನೀಡಬೇಕಿತ್ತು ಎಂದು ಗಾವಸ್ಕರ್ ಪ್ರತಿಪಾದಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮಂಡಳಿಯ ಅಧಿಕಾರಿಯೊಬ್ಬರು, ’ಆಯ್ಕೆಯಾಗದಿರುವ ಕುರಿತು ಬರುತ್ತಿರುವ ಹೇಳಿಕೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಸರ್ಫರಾಜ್ ಅವರನ್ನು ಪರಿಗಣಿಸದಿರುವ ಹಿಂದೆ ಕೆಲವು ಕಾರಣಗಳಿವೆ. ಆದರೆ ಅವರ ಕ್ರಿಕೆಟ್ ಸಾಧನೆ ಬಗ್ಗೆ ಎರಡು ಮಾತಿಲ್ಲ‘ ಎಂದಿದ್ದಾರೆ. ‘ರಣಜಿ ಋತುಗಳಲ್ಲಿ ಸತತವಾಗಿ 900 ಕ್ಕೂ ಹೆಚ್ಚು ರನ್‌ ಗಳಿಸಿರುವ ಅವರನ್ನು ಪರಿಗಣಿಸದಿರಲು ಆಯ್ಕೆಗಾರರೇನು ಮೂರ್ಖರಲ್ಲ. ಇದರ ಹಿಂದೆ ಬಲವಾದ ಕಾರಣಗಳಿರಲೇಬೇಕಲ್ಲವೇ? ಪ್ರಮುಖವಾಗಿ ಅವರ ಫಿಟ್‌ನೆಸ್‌ ಅಂತರರಾಷ್ಟ್ರೀಯ ದರ್ಜೆಗೆ ಸರಿಹೊಂದುವಂತಿಲ್ಲ. ಅದಕ್ಕಾಗಿ ಅವರು ಬಹಳಷ್ಟು ಕಠಿಣ ಪ್ರಯತ್ನ ಮಾಡಬೇಕಿದೆ. ದೇಹತೂಕ ಇಳಿಸಿಕೊಳ್ಳುವುದು ಮುಖ್ಯವಾಗಿದೆ. ಕೇವಲ ಬ್ಯಾಟಿಂಗ್ ಮಾತ್ರ, ಉಳಿದ ವಿಭಾಗಗಳಲ್ಲಿಯೂ ಅವರು ಸಮರ್ಥರಾಗಿ ಆಡಬೇಕು‘ ಎಂದು ಹೇಳಿದ್ದಾರೆ. ಕಳೆದ ವರ್ಷದ ದೆಹಲಿ ಎದುರಿನ ರಣಜಿ ಪಂದ್ಯವೊಂದರಲ್ಲಿ ಶತಕ ಬಾರಿಸಿದ ನಂತರ ಸರ್ಫರಾಜ್ ಸಂಭ್ರಮಿಸುವಾಗ ತೋರಿದ್ದ ಹಾವಭಾವಗಳು ಕೂಡ ಆಕ್ಷೇಪಾರ್ಹವಾಗಿದ್ದವು ಎನ್ನಲಾಗಿದೆ. ‘ಮಯಂಕ್ ಅಗರವಾಲ್ ಅವರು ಒಂದು ಋತುವಿನಲ್ಲಿ ಸಾವಿರ ರನ್‌ ಗಳಿಸಿದ್ದಾಗ ಭಾರತ ತಂಡಕ್ಕೆ ಆಯ್ಕೆಯಾದರು. ಅದೇ ರೀತಿ ಹನುಮವಿಹಾರಿ ಭಾರತ ಎ ತಂಡದಲ್ಲಿ ತೋರಿದ್ದ ಆಟವನ್ನು ಪರಿಗಣಿಸಲಾಗಿತ್ತು. ಆಗಿನ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ಅವರು ಈ ಆಟಗಾರರ ಐಪಿಎಲ್ ಸಾಧನೆಯನ್ನು ನೋಡಿರಲಿಲ್ಲ. ಈಗ ಶಿವಸುಂದರ್ ದಾಸ್ ಸಮಿತಿಯೂ ಅದೇ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ‘ ಎಂದೂ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.