ದೇಸಿ ಕ್ರಿಕೆಟ್‌: ಗುಜರಾತ್‌ ಪರ ಆಡಲಿರುವ ಬಿಷ್ಣೋಯಿ ನವದೆಹಲಿ: ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿ ಅವರು ದೇಸಿ ಕ್ರಿಕೆಟ್‌ನಲ್ಲಿ ತವರು ರಾಜ್ಯ ರಾಜಸ್ಥಾನ ತಂಡವನ್ನು ತೊರೆದು ಗುಜರಾತ್‌ ಪರ ಆಡಲು ನಿರ್ಧರಿಸಿದ್ದಾರೆ. ಮುಂಬರುವ ಋತುವಿನಲ್ಲಿ ಗುಜರಾತ್‌ ತಂಡವನ್ನು ಪ್ರತಿನಿಧಿಸಲಿರುವ ವಿಷಯವನ್ನು ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಪೋಷಾಕು ಧರಿಸಿ ಅಭ್ಯಾಸ ಮಾಡುತ್ತಿರುವ ಫೋಟೊ ಪ್ರಕಟಿಸಿರುವ ಬಿಷ್ಣೋಯಿ, ‘ಹೊಸ ಆರಂಭ’ ಎಂದು ಬರೆದುಕೊಂಡಿದ್ದಾರೆ. 22 ವರ್ಷದ ಬಿಷ್ಣೋಯಿ ಕಳೆದ ವರ್ಷ ಟಿ20 ವಿಶ್ವಕಪ್‌ಗೂ ಮುನ್ನ, ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನಾಡಿದ್ದರು. 2022ರ ಏಷ್ಯಾಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರೂ ಅವರನ್ನು ಟಿ20 ವಿಶ್ವಕಪ್‌ ಟೂರ್ನಿಗೆ ಆಯ್ಕೆ ಮಾಡಿರಲಿಲ್ಲ. ಇದುವರೆಗೆ 10 ಟಿ20 ಮತ್ತು ಒಂದು ಏಕದಿನ ಅಂತರರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಈಚೆಗೆ ನಡೆದ ಐಪಿಎಲ್‌ ಟೂರ್ನಿಯಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಪರ 16 ವಿಕೆಟ್‌ಗಳನ್ನು ಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.