ಗಗನದಿಂದ ಭುವಿಗಿಳಿದ ಟ್ರೋಫಿ: ಏಕದಿನ ವಿಶ್ವಕಪ್‌ನ ಚಿತ್ತಾಕರ್ಷಕ ಅನಾವರಣ ದುಬೈ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟ್ರೋಫಿಯು ಚಿತ್ತಾಕರ್ಷಕ ರೀತಿಯಲ್ಲಿ ಅನಾವರಣಗೊಂಡಿದ್ದು, ಭಾರತದಲ್ಲಿ ಟೂರ್ನಿ ನಡೆಯುವ ಮೊದಲು ವಿಶ್ವದ ಆಯ್ದ ರಾಷ್ಟ್ರಗಳಿಗೆ ಸಂಚರಿಸಲಿದೆ. ಕ್ರಿಕೆಟ್‌ ಪ್ರೇಮಿಗಳಿಗೆ ವಿಶ್ವಕಪ್‌ ಜೊತೆ ಕಾಣಿಸಿಕೊಳ್ಳುವ ಅಪರೂಪದ ಅವಕಾಶವು ದೊರೆಯಲಿದೆ. ಇದಕ್ಕೆ ಮೊದಲು ಟ್ರೋಫಿಯ ಅನಾವರಣಕ್ಕೆ ಅತ್ಯಾಕರ್ಷಕ ರೀತಿಯಲ್ಲಿ ಚಾಲನೆ ನೀಡಲಾಯಿತು. ಭುವಿಯಿಂದ 1,20,000 ಅಡಿ ಎತ್ತರದಲ್ಲಿ ಬಲೂನ್‌ಗೆ ಕಟ್ಟಿದ ಪ್ರತಿಷ್ಠಿತ ಬೆಳ್ಳಿಯ ಟ್ರೋಫಿಯನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚಿತ್ತಾಕರ್ಷಕ ರೀತಿಯಲ್ಲಿ ಇಳಿಸಲಾಯಿತು. ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಈ ಅದ್ಭುತ ದೃಶ್ಯವನ್ನು ಸೆರೆಹಿಡಿಯಲಾಯಿತು. ಇದು ಗಗನಕ್ಕೇರಿದ ಮೊದಲ ಕ್ರೀಡಾ ಟ್ರೋಫಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. 2023ರ ಟ್ರೋಫಿಯ ಪ್ರವಾಸ ಇದುವರೆಗಿನ ಅತಿ ದೊಡ್ಡದು ಎನಿಸಲಿದ್ದು ಕ್ರಿಕೆಟ್‌ ಪ್ರೇಮಿಗಳಿಗೆ ಟ್ರೋಫಿಯೊಂದಿಗೆ ಒಡನಾಡುವ ಅವಕಾಶ ದೊರೆಯಲಿದೆ. ಜೂನ್‌ 27 ರಂದು ಟ್ರೋಫಿಯ ‘ವಿಶ್ವ ಸಂಚಾರ’ ಆರಂಭವಾಗಲಿದ್ದು, 18 ರಾಷ್ಟ್ರಗಳಿಗೆ ಸಂಚರಿಸಲಿದೆ. ಇವುಗಳಲ್ಲಿ ಕುವೈತ್‌, ಬಹರೇನ್‌, ಮಲೇಷ್ಯಾ, ನೈಜೀರಿಯಾ, ಉಗಾಂಡಾ, ಫ್ರಾನ್ಸ್‌, ಇಟಲಿ, ಅಮೆರಿಕ ದೇಶಗಳು ಒಳಗೊಂಡಿವೆ. ಅಲ್ಲಿಂದ ಭಾರತಕ್ಕೆ ಬರಲಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.‌ ‘ಐಸಿಸಿ ಪುರುಷರ ವಿಶ್ವಕಪ್‌ ಟ್ರೋಫಿಯ ಸಂಚಾರವು ಟೂರ್ನಿಯ ಕೌಂಟ್‌ಡೌನ್‌ನಲ್ಲಿ ಪ್ರಮುಖ ಮೈಲಿಗಲ್ಲು. ಇದು ಅತಿ ದೊಡ್ಡ ವಿಶ್ವಕಪ್‌ ಟೂರ್ನಿಯಾಗಲಿದೆ’ ಎಂದು ಐಸಿಸಿ ಚೀಫ್‌ ಎಕ್ಸಿಕ್ಯೂಟಿವ್‌ ಜೆಫ್‌ ಆಲ್ಡರ್‌ಡೈಸ್‌ ತಿಳಿಸಿದರು. ‘ಈ ಆಕರ್ಷಕ ಟ್ರೋಫಿಯ ಪ್ರವಾಸದ ವೇಳೆ ವಿವಿಧ ದೇಶಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಪ್ರಮುಖ ಸಾಮುದಾಯಕ ಚಟುವಟಿಕೆಗೆ ಚಾಲನೆ ಸಿಗಲಿದೆ. ಕ್ರಿಕೆಟ್‌ ಅಭಿವೃದ್ಧಿ ಚಟುವಟಿಕೆಗೆ ಬೆಂಬಲ ಸಿಗಲಿದೆ. ವಿಶ್ವದ ಕೆಲವು ಆಕರ್ಷಕ ತಾಣಗಳಿಗೂ ತಲುಪಲಿದೆ’ ಎಂದರು. ‘ಭಾರತವನ್ನು ಕ್ರಿಕೆಟ್‌ನಷ್ಟು ಬೇರೆ ಯಾವ ಕ್ರೀಡೆಯೂ ಒಗ್ಗೂಡಿಸುವುದಿಲ್ಲ. ಈಗಾಗಲೇ ದೇಶದಾದ್ಯಂತ ಉತ್ಸಾಹ ಕಾಣಿಸಿಕೊಳ್ಳತೊಡಗಿದೆ. ವಿಶ್ವದ 10 ಅತ್ಯುತ್ತಮ ತಂಡಗಳು ಆರು ವಾರಗಳ ಕಾಲ ಜನರನ್ನು ರೋಮಾಂಚನಗೊಳಿಸಲಿವೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್‌ ಶಾ ಹೇಳಿದರು. ಅಕ್ಟೋಬರ್‌ 5 ರಿಂದ ನವೆಂಬರ್‌ 19ರವರೆಗೆ ಈ ಟೂರ್ನಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.