2023 | ವಾಂಖೆಡೆ, ಈಡನ್‌ಗೆ ಸೆಮಿಫೈನಲ್‌ ಆತಿಥ್ಯ? ನವದೆಹಲಿ : ಮುಂಬೈನ ವಾಂಖೆಡೆ ಮತ್ತು ಕೋಲ್ಕತ್ತದ ಈಡನ್‌ ಗಾರ್ಡನ್‌ ಕ್ರೀಡಾಂಗಣಗಳು ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯಗಳ ಆತಿಥ್ಯ ವಹಿಸುವ ತಾಣಗಳಲ್ಲಿ ಮುಂಚೂಣಿಯಲ್ಲಿವೆ. ಹೀಗಾಗಿ ದೇಶದ ಇನ್ನೊಂದು ಪ್ರಮುಖ ಕ್ರೀಡಾಂಗಣ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣಕ್ಕೆ ಬಹು ಪ್ರಮುಖ ಪಂದ್ಯದ ಆತಿಥ್ಯ ಕೈತಪ್ಪುವ ಸಾಧ್ಯತೆಯಿದೆ. ‘ವಾಂಖೆಡೆ ಮತ್ತು ಈಡನ್‌ ಗಾರ್ಡನ್‌ ಕ್ರೀಡಾಂಗಣಗಳು ಸೆಮಿಫೈನಲ್‌ ಪಂದ್ಯಗಳಿಗೆ ತಾಣಗಳಾಗುವ ಸಾಧ್ಯತೆಯಿದೆ. ಚೆನ್ನೈ ಕೂಡ ಈ ಹಿಂದೆ ಪೈಪೋಟಿಯಲ್ಲಿತ್ತು. ಈಗ ಕೋಲ್ಕತ್ತ ಮುಂದಿದೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮೂಲ ಸೋಮವಾರ ಪಿಟಿಐಗೆ ತಿಳಿಸಿದೆ. ನವೆಂಬರ್‌ನಲ್ಲಿ ಚೆನ್ನೈನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿರುವುದು ಇದಕ್ಕೆ ಕಾರಣ. ಆತಿಥ್ಯ ವಹಿಸುವ 12 ತಾಣಗಳ ಕ್ರಿಕೆಟ್‌ ಸಂಸ್ಥೆಗಳ ಸಭೆ ಸೋಮವಾರ ಮುಂಬೈನಲ್ಲಿ ನಡೆದು, ವೇಳಾಪಟ್ಟಿ ಅಂತಿಮಗೊಳಿಸುವ ಸಂಬಂಧ ಸಮಾಲೋಚನೆ ನಡೆಯಿತು. ಮಂಗಳವಾರ ವೇಳಾಪಟ್ಟಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಭಾರತವು ಸೆಮಿಫೈನಲ್‌ಗೆ ಅರ್ಹತೆ ಪಡೆದರೆ ತನ್ನ ಪಂದ್ಯವನ್ನು ಮುಂಬೈನಲ್ಲಿ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.