2023 | ಮೈದಾನ ಬದಲಿಸುವ ಪಾಕಿಸ್ತಾನದ ಮನವಿ ತಿರಸ್ಕರಿಸಿದ ಐಸಿಸಿ ಕರಾಚಿ: ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ತಂಡದ ಪಂದ್ಯಗಳಿಗಾಗಿ ನಿಗದಿ ಮಾಡಲಾಗಿರುವ ತಾಣಗಳ ಬದಲಾವಣೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮನವಿ ಸಲ್ಲಿಸಿತ್ತು. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ಮನವಿಯನ್ನು ತಿರಸ್ಕರಿಸಿದೆ. ಪಾಕಿಸ್ತಾನ ತಂಡವು ಅಫ್ಗಾನಿಸ್ತಾನದ ಎದುರು ಚೆನ್ನೈನಲ್ಲಿ ಹಾಗೂ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ಪಂದ್ಯ ಆಡಬೇಕಿದೆ. ಆದರೆ ಅಫ್ಗಾನಿಸ್ತಾನ ಎದುರಿನ ಪಂದ್ಯವನ್ನು ಬೆಂಗಳೂರಿಗೆ ಹಾಗೂ ಆಸ್ಟ್ರೇಲಿಯಾದೆದುರಿನ ಹಣಾಹಣಿಯನ್ನು ಚೆನ್ನೈಗೆ ಸ್ಥಳಾಂತರಿಸುವಂತೆ ಪಾಕ್ ಮಂಡಳಿ ಮನವಿ ಮಾಡಿತ್ತು. ಚೆನ್ನೈನ ಚೆಪಾಕ್ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಇತಿಹಾಸವಿದೆ. ಅಫ್ಗಾನಿಸ್ತಾನ ತಂಡದಲ್ಲಿ ಪರಿಣಾಮಕಾರಿ ಸ್ಪಿನ್ನರ್‌ಗಳು ಇರುವುದರಿಂದ ಪಾಕ್ ತಂಡಕ್ಕೆ ಹಿನ್ನಡೆಯ ಸಾಧ್ಯತೆ ಇದೆ. ಆದ್ದರಿಂದ ಸ್ಥಳ ಬದಲಿಸಬೇಕು ಎಂದು ಕೇಳಿಕೊಂಡಿತ್ತು. ಆದರೆ ಐಸಿಸಿಯು ಇದನ್ನು ಪುರಸ್ಕರಿಸಿಲ್ಲ. ಭಾರತಕ್ಕೆ ಪಾಕ್: ಐಸಿಸಿ ವಿಶ್ವಾಸ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಪಾಕಿಸ್ತಾನ ತಂಡವನ್ನು ಕಳುಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅನುಮತಿ ನೀಡಲಿದೆ ಎಂದು ಐಸಿಸಿ ವಿಶ್ವಾಸ ವ್ಯಕ್ತಪಡಿಸಿದೆ. ‘ಪಾಕ್ ತಂಡವು ಭಾರತಕ್ಕೆ ಆಡಲು ಬರಲಿದೆ. ನೂರಕ್ಕೆ ನೂರರಷ್ಟು ವಿಶ್ವಾಸ ನಮಗಿದೆ‘ ಎಂದು ಐಸಿಸಿ ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಿಸಿಬಿ ಮೂಲಗಳು ‘ನಾವು ಈಗಾಗಲೇ ವಿಶ್ವಕಪ್ ಟೂರ್ನಿಯಲ್ಲ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದೇವೆ. ಸ್ಥಳ ಬದಲಾವಣೆ ಕುರಿತ ವಿಷಯ ಮತ್ತು ಭಾರತಕ್ಕೆ ಪ್ರಯಾಣಿಸಲು ಪಾಕ್ ಸರ್ಕಾರದಿಂದ ಅನುಮತಿ ಲಭಿಸುವ ಕುರಿತು ತಿಳಿಸಲಾಗುವುದು‘ ಎಂದು ಹೇಳಿವೆ. ಭಾರತಕ್ಕೆ ಪ್ರಯಾಣಿಸಲು ಪಿಸಿಬಿಗೆ ಅಲ್ಲಿಯ ಸರ್ಕಾರವು ಇನ್ನೂ ನಿರಾಕ್ಷೇಪಣ ಪತ್ರ ಮಂಜೂರು ಮಾಡಿಲ್ಲವೆನ್ನಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.