2023 | ಏಕದಿನ ವಿಶ್ವಕಪ್ ಕಠಿಣ ಪೈಪೋಟಿಯಿಂದ ಕೂಡಿರಲಿದೆ: ರೋಹಿತ್ ಮುಂಬೈ: ಈ ಬಾರಿ ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕಠಿಣ ಪೈಪೋಟಿಯಿಂದ ಕೂಡಿರಲಿದೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆಗೊಳಿಸಿದೆ. ಭಾರತ ತಂಡವು ಲೀಗ್ ಹಂತದ ಪಂದ್ಯಗಳನ್ನು ಒಂಬತ್ತು ವಿಭಿನ್ನ ಮೈದಾನಗಳಲ್ಲಿ ಆಡಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಪ್ತಾನ ರೋಹಿತ್, ಕ್ರಿಕೆಟ್ ಆಡುವ ರೀತಿ ಹಿಂದಿಗಿಂತಲೂ ಧನಾತ್ಮಕವಾಗಿದ್ದು, ಈ ಬಾರಿಯ ವಿಶ್ವಕಪ್‌ ಹೆಚ್ಚು ಸ್ಪರ್ಧಾತ್ಮಕತೆಯಿಂದ ಕೂಡಿರಲಿದೆ ಎಂದು ಹೇಳಿದ್ದಾರೆ. ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡವು ಅತ್ಯುತ್ತಮ ಪೂರ್ವ ಸಿದ್ಧತೆಯನ್ನು ಮಾಡಲಿದೆ ಎಂದು ರೋಹಿತ್ ಭರವಸೆ ನೀಡಿದರು. ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ತಂಡದ ಸವಾಲನ್ನು ಎದುರಿಸಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಅಕ್ಟೋಬರ್ 15ರಂದು ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿಗದಿಯಾಗಿದೆ. 2011ರಲ್ಲಿ ತವರಿನಲ್ಲಿ ಆಯೋಜಿಸಲಾದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಜಯಭೇರಿ ಮೊಳಗಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.