ದುಲೀಪ್ ಟ್ರೋಫಿ: ಯುವನಾಯಕರ ಹಣಾಹಣಿಗೆ ವೇದಿಕೆ ಸಜ್ಜು ಬೆಂಗಳೂರು: ಬುಧವಾರದಿಂದ ದೇಶಿ ಕ್ರಿಕೆಟ್ ಋತುವಿನ ಆರಂಭವಾಗಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ದುಲೀಪ್ ಟ್ರೋಫಿಯನ್ನು ಆಯೋಜಿಸುವ ಮೂಲಕ ಋತುವಿಗೆ ಮುನ್ನುಡಿ ಬರೆಯಲಿದೆ. ಬುಧವಾರದಿಂದ ಜುಲೈ 1ರವರೆಗೆ ಎರಡು ಕ್ವಾರ್ಟರ್‌ಫೈನಲ್‌ಗಳು ನಡೆಯಲಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಎಂಟರ ಘಟ್ಟದ ಪಂದ್ಯದಲ್ಲಿ ಉತ್ತರ ವಲಯ ಮತ್ತು ಈಶಾನ್ಯ ವಲಯ ಮುಖಾಮುಖಿಯಾಗಲಿವೆ. ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕೇಂದ್ರ ವಲಯ ಹಾಗೂ ಪೂರ್ವ ವಲಯ ತಂಡಗಳು ಸೆಣಸಲಿವೆ. ಪಂಜಾಬಿನ ಮನದೀಪ್ ಸಿಂಗ್ ಅವರು ಉತ್ತರ ವಲಯ ತಂಡವನ್ನು ಹಾಗೂ ಈಶಾನ್ಯ ವಲಯವನ್ನು ರಾಂಗಸೇನ್ ಜೊನಾಥನ್ ಮುನ್ನಡೆಸಲಿದ್ದಾರೆ. ಉತ್ತರ ವಲಯದಲ್ಲಿ ಅನುಭವಿಗಳಾದ ಸಿದ್ಧಾರ್ಥ್ ಕೌಲ್, ಜಯಂತ್ ಯಾದವ್, ಪ್ರಭಸಿಮ್ರನ್ ಸಿಂಗ್ ಅವರು ಇದ್ದಾರೆ. ಈಶಾನ್ಯ ತಂಡದಲ್ಲಿ ಜೊನಾಥನ್ ಬಿಟ್ಟರೆ ಉಳಿದವರಿಗೆ ಹೆಚ್ಚು ಅನುಭವ ಇಲ್ಲ. ಆದ್ದರಿಂದ ಉತ್ತರ ವಲಯ ತಂಡವು ಪ್ರಾಬಲ್ಯ ಮೆರೆಯುವ ಸಾಧ್ಯತೆ ಹೆಚ್ಚು. ಆಲೂರಿನ ಪಂದ್ಯದಲ್ಲಿ ಆಡಲಿರುವ ಪೂರ್ವ ವಲಯ ತಂಡಕ್ಕೆ ಅಭಿಮನ್ಯು ಈಶ್ವರನ್ ನಾಯಕರಾಗಿದ್ದಾರೆ. ಶಾಬಾಜ್ ನದೀಂ, ಅಭಿಷೇಕ್ ಪೊರೆಲ್, ಮುಕೇಶ್ ಕುಮಾರ್, ಶಾಬಾಜ್ ಅಹಮದ್ ಅವರು ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಮಧ್ಯಮವೇಗಿ ಶಿವಂ ಮಾವಿ ನಾಯಕತ್ವದ ಕೇಂದ್ರ ವಲಯವು ಪೂರ್ವ ವಲಯಕ್ಕೆ ಪೈಪೋಟಿಯೊಡ್ಡಲಿದೆ. ಇತ್ತೀಚೆಗೆ ಐಪಿಎಲ್‌ನಲ್ಲಿ ಮಿಂಚಿದ್ದ ’ಸಿಕ್ಸರ್ ಕಿಂಗ್‘ ರಿಂಕು ಸಿಂಗ್, ಬೌಲರ್ ಆವೇಶ್ ಖಾನ್ ಅವರು ಈ ತಂಡದಲ್ಲಿದ್ದಾರೆ. ಆದ್ದರಿಂದ ಈ ಪಂದ್ಯವು ಉತ್ತಮ ಸ್ಪರ್ಧೆ ಕಾಣುವ ನಿರೀಕ್ಷೆ ಇದೆ. ಹೋದ ವರ್ಷದ ಚಾಂಪಿಯನ್ ಪಶ್ಚಿಮ ವಲಯ ಹಾಗೂ ರನ್ನರ್ಸ್ ಅಪ್ ದಕ್ಷಿಣ ವಲಯ ತಂಡಗಳು ಸೆಮಿಫೈನಲ್‌ಗೆ ನೇರ ಅರ್ಹತೆ ಪಡೆದಿವೆ. ಜುಲೈ 5ರಿಂದ 8ರವರೆಗೆ ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯಲಿವೆ. ಫೈನಲ್‌ ಪಂದ್ಯ ಕೂಡ ಜುಲೈ 12 ರಿಂದ 16ರವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದು. ಪಂದ್ಯ ಆರಂಭ: ಬೆಳಿಗ್ಗೆ 9.30 ಪಟ್ಟಿ ಪ್ರಶಸ್ತಿ ಜಯಿಸಿದ ವಲಯ ತಂಡಗಳು (ಕಳೆದ 10 ವರ್ಷಗಳಲ್ಲಿ) ಋತು;ವಿಜೇತ ;ರನ್ನರ್ಸ್ ಅಪ್ 2012– 13;ಪೂರ್ವ;ಕೇಂದ್ರ 2013–14;ಉತ್ತರ–ದಕ್ಷಿಣ ಜಂಟಿ 2014–15;ಕೇಂದ್ರ–ದಕ್ಷಿಣ 2016–17;ಇಂಡಿಯಾಬ್ಲ್ಯೂ; ಇಂಡಿಯಾ ರೆಡ್ 2017–18;ಇಂಡಿಯಾ ರೆಡ್;ಇಂಡಿಯಾ ಬ್ಲ್ಯೂ 2018–19;ಇಂಡಿಯಾ ಬ್ಯ್ಲೂ;ಇಂಡಿಯಾ ರೆಡ್ 2019–20;ಇಂಡಿಯಾ ರೆಡ್;ಇಂಡಿಯಾ ಗ್ರೀನ್ 2022–23;ಪಶ್ಚಿಮ;ದಕ್ಷಿಣ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.