ಆ್ಯಶಸ್ ಟೆಸ್ಟ್ ಸರಣಿ: ಆಸ್ಟ್ರೇಲಿಯಾಕ್ಕೆ ಉಸ್ಮಾನ್ ಶತಕದಾಸರೆ ಬರ್ಮಿಂಗ್‌ಹ್ಯಾಮ್: ಬ್ಯಾಟರ್‌ಗಳ ತಾಳ್ಮೆ ಮತ್ತು ಏಕಾಗ್ರತೆಗೆ ಸವಾಲೊಡ್ಡುವಂತಹ ಎಸೆತಗಳ ಮುಂದೆ ಶಾಂತಚಿತ್ತರಾಗಿ ಆಡಿದ ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾ ಚೆಂದದ ಶತಕ ದಾಖಲಿಸಿದರು. ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು ಉಸ್ಮಾನ್ (ಬ್ಯಾಟಿಂಗ್ 106; 213ಎ, 4X12, 6X2) ಶತಕದ ಬಲದಿಂದ 71 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 230 ರನ್ ಗಳಿಸಿತು. ಪಂದ್ಯದ ಮೊದಲ ದಿನವಾದ ಶುಕ್ರವಾರ ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 78 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 393 ರನ್‌ಗಳನ್ನು ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಶನಿವಾರ ಬೆಳಿಗ್ಗೆ 11ನೇ ಓವರ್‌ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಷೇನ್ ಅವರಿಬ್ಬರ ವಿಕೆಟ್ ಕಬಳಿಸಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಹಿರಿಹಿರಿ ಹಿಗ್ಗಿದರು. ಆದರೆ ಉಸ್ಮಾನ್ ಮಾತ್ರ ಸ್ವಿಂಗ್ ಎಸೆತಗಳನ್ನು ಎಚ್ಚರಿಕೆಯಿಂದ ಆಡಿ ರನ್‌ ಗಳಿಸಿದರು. ಸ್ಟೀವನ್ ಸ್ಮಿತ್ ಕೇವಲ 16 ರನ್‌ ಗಳಿಸಿ, ಬೆನ್ ಸ್ಟೋಕ್ಸ್‌ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಈಚೆಗೆ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಶತಕ ಬಾರಿಸಿದ್ದ ಟ್ರಾವಿಸ್ ಹೆಡ್ (50; 63ಎ) ಇಲ್ಲಿಯೂ ಉಪಯುಕ್ತ ಕಾಣಿಕೆ ನೀಡಿದರು. ಉಸ್ಮಾನ್ ಜೊತೆಗೂಡಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 81 ರನ್‌ಗಳನ್ನು ಸೇರಿಸಿದರು. ಮೋಯಿನ್ ಅಲಿ ಎಸೆತದಲ್ಲಿ ಹೆಡ್ ವಿಕೆಟ್ ಉರುಳಿತು. ಇದರೊಂದಿಗೆ ಜೊತೆಯಾಟ ಮುರಿಯಿತು.ಕ್ಯಾಮರಾನ್ ಗ್ರೀನ್ 38 ರನ್‌ಗಳ ಕಾಣಿಕೆ ನೀಡಿ ಮೋಯಿನ್ ಬೌಲಿಂಗ್‌ನಲ್ಲಿ ಔಟಾದರು. ಆದರೆ ಎಡಗೈ ಬ್ಯಾಟರ್ ಉಸ್ಮಾನ್ ಅವರ ಆಟಕ್ಕೆ ತಡೆಯೊಡ್ಡಲು ಇಂಗ್ಲೆಂಡ್ ಬೌಲಿಂಗ್ ಪಡೆಗೆ ಸಾಧ್ಯವಾಗಲಿಲ್ಲ. 36 ವರ್ಷದ ಉಸ್ಮಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ 15ನೇ ಶತಕ ದಾಖಲಿಸಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್– ಇಂಗ್ಲೆಂಡ್: 78 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 393 ಡಿಕ್ಲೇರ್ಡ್. ಆಸ್ಟ್ರೇಲಿಯಾ:71 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 230 (ಉಸ್ಮಾನ್ ಖ್ವಾಜಾ ಬ್ಯಾಟಿಂಗ್ 106, ಟ್ರಾವಿಸ್ ಹೆಡ್ 50, ಕ್ಯಾಮರಾನ್ ಗ್ರೀನ್ 38, ಸ್ಟುವರ್ಟ್ ಬ್ರಾಡ್ 31ಕ್ಕೆ2, ಮೋಯಿನ್ ಅಲಿ 97ಕ್ಕೆ2, ಬೆನ್ ಸ್ಟೋಕ್ಸ್ 33ಕ್ಕೆ1) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.