ಬಾಂಗ್ಲಾದೇಶಕ್ಕೆ ದಾಖಲೆ ಜಯ ಮೀರ್‌ಪುರ್‌ (ಎಪಿ): ಬಾಂಗ್ಲಾದೇಶ ತಂಡದವರು ಏಕೈಕ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಅಫ್ಗಾನಿಸ್ತಾನ ತಂಡದ ಮೇಲೆ 546 ರನ್‌ಗಳ ಭಾರಿ ಜಯ ಪಡೆದರು. ರನ್‌ಗಳ ಲೆಕ್ಕದಲ್ಲಿ ಇದು ಬಾಂಗ್ಲಾದೇಶದ ದಾಖಲೆ ಅಂತರದ ಮತ್ತು ಟೆಸ್ಟ್‌ ಇತಿಹಾಸದಲ್ಲಿ ಮೂರನೇ ಅತಿ ದೊಡ್ಡ ವಿಜಯವಾಗಿದೆ. ಬಾಂಗ್ಲಾದೇಶ ಗೆಲುವಿಗೆ ಹೆಚ್ಚಿನ ಪ್ರಯಾಸ ಪಡಲಿಲ್ಲ. ತಸ್ಕಿನ್‌ ಅಹ್ಮದ್ 37 ರನ್ನಿಗೆ 4 ವಿಕೆಟ್‌ ಪಡೆದು ಅಫ್ಗಾನಿಸ್ತಾನ ತಂಡ 115 ರನ್ನಿಗೆ ಉರುಳಲು ಪ್ರಮುಖ ಕಾರಣರಾದರು. ಮೂರನೇ ದಿನ, ಆತಿಥೇಯರು, ಅಫ್ಗಾನಿಸ್ತಾನ ಗೆಲುವಿಗೆ 663 ರನ್‌ಗಳ ಅತಿ ದೊಡ್ಡ ಗುರಿ ನಿಗದಿಪಡಿಸಿದ್ದರು. 2005ರಲ್ಲಿ ಜಿಂಬಾಬ್ವೆ ವಿರುದ್ಧ ಗಳಿಸಿದ 226 ರನ್‌ಗಳು, ಬಾಂಗ್ಲಾದೇಶದ ಇದುವರೆಗಿನ ದೊಡ್ಡ ವಿಜಯದ ಅಂತರವಾಗಿತ್ತು. ಈ ಪಂದ್ಯದಲ್ಲಿ ನಜ್ಮುಲ್‌ ಹುಸೇನ್‌ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು. ಸ್ಕೋರುಗಳು: ಬಾಂಗ್ಲಾದೇಶ: 382 ಮತ್ತು 4 ವಿಕೆಟ್‌ಗೆ 425 ಡಿಕ್ಲೇರ್‌; ಅಫ್ಗಾನಿಸ್ತಾನ: 146 ಮತ್ತು 115 (ರಹಮತ್‌ ಶಾ 30, ಶರೀಫುಲ್‌ ಇಸ್ಲಾಂ 28ಕ್ಕೆ3, ತಸ್ಕಿನ್‌ ಅಹ್ಮದ್ 37ಕ್ಕೆ4). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.