ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಲೆಸ್ಟರ್‌ಷೈರ್‌ ತಂಡಕ್ಕಾಗಿ ಆಡಲಿರುವ ರಹಾನೆ ನವದೆಹಲಿ : ಭಾರತ ಕ್ರಿಕೆಟ್‌ ತಂಡದ ಬ್ಯಾಟರ್‌ ಅಜಿಂಕ್ಯ ರಹಾನೆ ಅವರು ವೆಸ್ಟ್ ಇಂಡೀಸ್‌ ಪ್ರವಾಸದ ಬಳಿಕ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಲೆಸ್ಟರ್‌ಷೈರ್‌ ತಂಡದ ಪರ ಆಡಲಿದ್ದಾರೆ. ರಹಾನೆ ಅವರು ಲೆಸ್ಟರ್‌ಷೈರ್‌ ಪರ ಆಡುವುದಕ್ಕೆ ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಐಪಿಎಲ್‌ ಬಳಿಕ ಅವರು ತಂಡವನ್ನು ಸೇರಿಕೊಳ್ಳಬೇಕಿತ್ತು. ಆದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದದ್ದರಿಂದ ಅವರಿಗೆ ಕೌಂಟಿ ತಂಡವನ್ನು ಸೇರಿಕೊಳ್ಳಲು ಆಗಿಲ್ಲ. ವೆಸ್ಟ್‌ ಇಂಡೀಸ್‌ ವಿರುದ್ದದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅವರು ಭಾರತ ತಂಡದಲ್ಲಿ ಆಡುವ ಸಾಧ್ಯತೆಯಿದೆ. ಈ ಪ್ರವಾಸದ ಬಳಿಕ (ಜುಲೈ 24ರ ನಂತರ) ಅವರು ನೇರವಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದು, ಲೆಸ್ಟರ್‌ಷೈರ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕೌಂಟಿ ಋತುವಿನಲ್ಲಿ ಇನ್ನುಳಿದ ಪಂದ್ಯಗಳು ಮತ್ತು ರಾಯಲ್‌ ಲಂಡನ್‌ ಕಪ್‌ (ಏಕದಿನ ಕ್ರಿಕೆಟ್‌ ಟೂರ್ನಿ) ಪಂದ್ಯಗಳಲ್ಲಿ ಅವರು ಆಡಲಿದ್ದಾರೆ. ರಹಾನೆ ಅವರು ಈ ಹಿಂದೆ 2019ರ ಕೌಂಟಿ ಋತುವಿನಲ್ಲಿ ಹ್ಯಾಂಪ್‌ಷೈರ್‌ ತಂಡದ ಪರ ಆಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.