ಆ್ಯಷಸ್ ಟೆಸ್ಟ್: ಇಂಗ್ಲೆಂಡ್‌ಗೆ ಪುಟ್ಟ ಮುನ್ನಡೆ ಬರ್ಮಿಂಗ್‌ಹ್ಯಾಮ್ : ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಏಳು ರನ್‌ಗಳ ಅಲ್ಪ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ಪಂದ್ಯದ ಮೂರನೇ ದಿನವಾದ ಭಾನುವಾರ ಆಸ್ಟ್ರೇಲಿಯಾ ತಂಡವು 116.1 ಓವರ್‌ಗಳಲ್ಲಿ 386 ರನ್‌ ಗಳಿಸಿ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು. ಇಂಗ್ಲೆಂಡ್ ತಂಡವು ಮೊದಲ ದಿನವೇ 8 ವಿಕೆಟ್‌ಗಳಿಗೆ 393 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಎರಡನೇ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ತಂಡ 10.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 28 ರನ್‌ ಗಳಿಸಿತು. ಈ ಸಂದರ್ಭದಲ್ಲಿ ಮಳೆ ಸುರಿದ ಕಾರಣ ಆಟವನ್ನು ಕೆಲಹೊತ್ತು ಸ್ಥಗಿತಗೊಳಿಸಲಾಯಿತು. ಎರಡನೇ ದಿನದಾಟದಲ್ಲಿ ದೊಡ್ಡ ಮುನ್ನಡೆ ಗಳಿಸುವ ಆತಿಥೇಯ ತಂಡದ ಯೋಜನೆಗೆ ಶತಕ ಗಳಿಸಿದ ಉಸ್ಮಾನ್ ಖ್ವಾಜಾ ಮತ್ತು ಅರ್ಧಶತಕ ಹೊಡೆದ ಅಲೆಕ್ಸ್ ಕ್ಯಾರಿ ಅಡ್ಡಿಯಾದರು. ಭಾನುವಾರವೂ ತಮ್ಮ ಆಟ ಮುಂದುವರಿಸಿದ ಉಸ್ಮಾನ್ ತಂಡಕ್ಕೆ ಆಸರೆಯಾದರು. ದೊಡ್ಡ ಅಂತರದ ಹಿನ್ನಡೆಯನ್ನು ತಪ್ಪಿಸಿದರು. ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್, ಒಲೀ ರಾಬಿನ್ಸನ್ ತಲಾ ಮೂರು ವಿಕೆಟ್ ಗಳಿಸಿದರು. ಪಂದ್ಯದಲ್ಲ ಇನ್ನೂ ಎರಡು ದಿನಗಳು ಬಾಕಿಯಿವೆ. ಇಂಗ್ಲೆಂಡ್ ತಂಡವು ಗೆಲ್ಲಬೇಕಾದರೆ, ಆಸ್ಟ್ರೇಲಿಯಾಕ್ಕೆ 200 ರನ್‌ಗಳ ಗುರಿ ನೀಡಿದರೆ ಉತ್ತಮ. ಏಕೆಂದರೆ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಇದುವರೆಗೆ ನಾಲ್ಕನೇ ಇನಿಂಗ್ಸ್‌ನಲ್ಲಿ ದಾಖಲೆಯಾದ ಗರಿಷ್ಠ ಮೊತ್ತ 160 ರನ್‌ ಮಾತ್ರ! ಆಸ್ಟ್ರೇಲಿಯಾ ತಂಡದವರೂ ಇಂಗ್ಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿ ಗೆಲುವಿನ ಗುರಿಸಾಧನೆ ಮಾಡುವ ಛಲದಲ್ಲಿದ್ದಾರೆ. ಸಂಕ್ಷಿಪ್ತ ಸ್ಕೋರು: ಪ್ರಥಮ ಇನಿಂಗ್ಸ್: ಇಂಗ್ಲೆಂಡ್; 8ಕ್ಕೆ393 ಡಿಕ್ಲೇರ್ಡ್. ಆಸ್ಟ್ರೇಲಿಯಾ: 116.1 ಓವರ್‌ಗಳಲ್ಲಿ 386 (ಉಸ್ಮಾನ್ ಖ್ವಾಜಾ 141, ಅಲೆಕ್ಸ್ ಕ್ಯಾರಿ 66, ಪ್ಯಾಟ್ ಕಮಿನ್ಸ್ 38, ಸ್ಟುವರ್ಟ್ ಬ್ರಾಡ್ 68ಕ್ಕೆ3, ಒಲೀ ರಾಬಿನ್ಸನ್ 55ಕ್ಕೆ3, ಮೋಯಿನ್ ಅಲಿ 147ಕ್ಕೆ2) ಎರಡನೇ ಇನಿಂಗ್ಸ್: ಇಂಗ್ಲೆಂಡ್: 10 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 28 (ಬೆನ್ ಡಕೆಟ್ 19, ಜ್ಯಾಕ್ ಕ್ರಾಲಿ 7, ಪ್ಯಾಟ್ ಕಮಿನ್ಸ್ 9ಕ್ಕೆ1, ಸ್ಕಾಟ್ ಬೊಲಾಂಡ್ 1ಕ್ಕೆ 1) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.