ಬಿಸಿಸಿಐ ಜೂನಿಯರ್‌ ಆಯ್ಕೆ ಸಮಿತಿಗೆ ಕರ್ನಾಟಕದ ತಿಲಕ್‌ ನಾಯ್ಡು ಮುಖ್ಯಸ್ಥ ನವದೆಹಲಿ: ಕರ್ನಾಟಕ ತಂಡದ ವಿಕೆಟ್‌ಕೀಪರ್ ಬ್ಯಾಟರ್‌ ಆಗಿದ್ದ ತಿಲಕ್‌ ನಾಯ್ಡು ಅವರನ್ನು ಬಿಸಿಸಿಐ 19 ವರ್ಷ ವಯಸ್ಸಿನೊಳಗಿನವರ ತಂಡದ ಆಯ್ಕೆ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ನಾಯ್ಡು ಅವರನ್ನು ಕೆಲ ದಿನಗಳ ಹಿಂದೆ ಆಯ್ಕೆ ಸಮಿತಿಗೆ ನೇಮಕ ಮಾಡಲಾಗಿತ್ತು. ಐವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ಅವರೇ ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ರಣದೇವ್ ಬೋಸ್, ಹರ್ವಿಂದರ್‌ ಸಿಂಗ್‌ ಸೋಧಿ, ಪಥಿಕ್‌ ಪಟೇಲ್‌ ಮತ್ತು ಕೃಷ್ಣ ಮೋಹನ್‌ ಅವರು ಸಮಿತಿಯ ಇತರ ಸದಸ್ಯರು. ಮಹಿಳಾ ತಂಡದ ಆಯ್ಕೆಗೆ ಸಮಿತಿಗೆ ಶ್ಯಾಮಾ ಡೆ: ಬಂಗಾಳ ಮತ್ತು ರೈಲ್ವೆ ತಂಡದ ಆಟಗಾರ್ತಿಯಾಗಿದ್ದ ಶ್ಯಾಮಾ ಡೆ ಶಾ ಅವರನ್ನು ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆ ಸಮಿತಿಗೆ ನೇಮಕ ಮಾಡಲಾಗಿದೆ. 51 ವರ್ಷದ ಶ್ಯಾಮಾ ಅವರು 1995 ರಲ್ಲಿ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಎರಡು ಅರ್ಧಶತಕಗಳನ್ನು ಗಳಿಸಿದ್ದರಲ್ಲದೆ, ಐದು ವಿಕಟ್‌ ಪಡೆದಿದ್ದರು. 1995–97ರ ಅವಧಿಯಲ್ಲಿ ಐದು ಏಕದಿನ ಪಂದ್ಯಗಳಲ್ಲಿ ಆಡಿದ್ದರು. ದೇಸಿ ಕ್ರಿಕೆಟ್‌ನಲ್ಲಿ ಅವರು ಬಂಗಾಳ (1985– 1997) ಹಾಗೂ ರೈಲ್ವೇಸ್ (1998) ತಂಡಗಳನ್ನು ಪ್ರತಿನಿಧಿಸಿದ್ದರು. ‘ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್‌ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿಯು ಅರ್ಜಿಗಳ ಪರಿಶೀಲನೆ ನಡೆಸಿ ತಿಲಕ್‌ ನಾಯ್ಡು ಮತ್ತು ಶ್ಯಾಮಾ ಡೆ ಅವರನ್ನು ಕ್ರಮವಾಗಿ ಜೂನಿಯರ್‌ ಹಾಗೂ ಮಹಿಳಾ ತಂಡದ ಆಯ್ಕೆ ಸಮಿತಿಗೆ ನೇಮಕ ಮಾಡಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.