ಐಸಿಸಿ ಏಕದಿನ ವಿಶ್ವಕಪ್‌ ಅರ್ಹತಾ ಟೂರ್ನಿ: ವನಿಂದು ಹಸರಂಗ ಮಾರಕ ಬೌಲಿಂಗ್‌ ಬುಲಾವಯೊ: ಲೆಗ್‌ ಸ್ಪಿನ್ನರ್‌ ವನಿಂದು ಹಸರಂಗ 24 ರನ್ನಿಗೆ ಆರು ವಿಕೆಟ್ ಪಡೆದು ಶ್ರೀಲಂಕಾ ತಂಡ, ಐಸಿಸಿ ಏಕದಿನ ವಿಶ್ವಕಪ್‌ ಅರ್ಹತಾ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಸೋಮವಾರ ಯುಎಇ ತಂಡವನ್ನು 175 ರನ್‌ಗಳ ದೊಡ್ಡ ಅಂತರದಿಂದ ಸೋಲಿಸಲು ನೆರವಾದರು. ಪ್ರಮುಖ ಬ್ಯಾಟರ್‌ಗಳ ಉಪಯುಕ್ತ ಕೊಡುಗೆಗಳ ನೆರವಿನಿಂದ ಶ್ರೀಲಂಕಾ 50 ಓವರುಗಳಲ್ಲಿ 6 ವಿಕೆಟ್‌ಗೆ 355 ರನ್‌ಗಳ ದೊಡ್ಡ ಮೊತ್ತ ಗಳಿಸಿತು. ಆಮೇಲೆ ಆರ್‌ಸಿಬಿ ಸ್ಪಿನ್ನರ್‌ ಕೂಡ ಆಗಿರುವ ಹಸರಂಗ ಮಿಂಚಿದರು. ತಮ್ಮ ಸಾಧನೆಯ ಹಾದಿಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಿದರು. ಒಮಾನ್‌ ತಂಡ, ಇನ್ನೊಂದು ಪಂದ್ಯದಲ್ಲಿ ಐರ್ಲೆಂಡ್‌ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಇದು ಟೂರ್ನಿಯ ಮೊದಲ ಅನಿರೀಕ್ಷಿತ ಫಲಿತಾಂಶ ಎನಿಸಿತು. ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರುಗಳಲ್ಲಿ 6 ವಿಕೆಟ್‌ಗೆ 355 (ಕುಶಾಲ್‌ ಮೆಂಡಿಸ್‌ 78, ಸಂದೀಪ್‌ ಸಮರವಿಕ್ರಮ 73, ಚರಿತ್‌ ಅಸಳಂಕ ಔಟಾಗದೇ 48; ಅಲಿ ನಾಸಿರ್‌ 44ಕ್ಕೆ2); ಯುಎಇ: 39 ಓವರುಗಳಲ್ಲಿ 180 (ಮುಹಮ್ಮದ್‌ ವಾಸಿಂ 39, ವೃತ್ಯ ಅರವಿಂದ್ 39; ವನೀಂದು ಹಸರಂಗ 24ಕ್ಕೆ6). ಐರ್ಲೆಂಡ್‌: 50 ಓವರುಗಳಲ್ಲಿ 7 ವಿಕೆಟ್‌ಗೆ 281 (ಜಾರ್ಜ್‌ ಡಾಕ್ರೆಲ್‌ 91, ಹ್ಯಾರಿ ಟೆಕ್ಟರ್‌ 52; ಬಿಲಾಲ್‌ ಖಾನ್‌ 64ಕ್ಕೆ2); ಒಮಾನ್‌: 48.1 ಓವರುಗಳಲ್ಲಿ 5 ವಿಕೆಟ್‌ಗೆ 285 (ಕಶ್ಯಪ ಪ್ರಜಾಪತಿ 72, ಜೀಶನ್‌ ಮಕ್ಸೂದ್ 59). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.