ಆ್ಯಷಸ್ ಮೊದಲ ಟೆಸ್ಟ್: ಆಸ್ಟ್ರೇಲಿಯಾಗೆ 281 ರನ್ ಗುರಿ– ಕುತೂಹಲಕಾರಿ ಘಟ್ಟದಲ್ಲಿ ಪಂದ್ಯ ಬರ್ಮಿಂಗ್‌ಹ್ಯಾಮ್‌: ಆ್ಯಷನ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯ ಕುತೂ ಹಲಕರ ಫಲಿತಾಂಶ ಕಾಣುವ ಸಾಧ್ಯತೆ ಇದೆ. ಗೆಲುವಿಗೆ ಆಸ್ಟ್ರೇಲಿಯಾ 281 ರನ್‌ ಗಳಿಸಬೇಕಾಗಿದ್ದು, ಸೋಮವಾರ ನಾಲ್ಕನೇ ದಿನದಾಟ ಮುಗಿದಾಗ 30 ಓವರುಗಳಲ್ಲಿ 3 ವಿಕೆಟ್‌ಗೆ 107 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಉಸ್ಮಾನ್ ಖ್ವಾಜಾ 34 ರನ್‌ ಮತ್ತು ‘ನೈಟ್‌ ವಾಚ್‌ಮನ್‌’ ಸ್ಕಾಟ್ ಬೊಲಾಂಡ್ 13 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಗೆಲುವಿನ ದಡ ಸೇರಲು ಇನ್ನೂ 174 ರನ್‌ ಬೇಕಿದೆ. ಇದಕ್ಕೂ ಮೊದಲು ಆಸ್ಟೇಲಿಯಾ ತಂಡದ ನಾಯಕ, ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ (63 ಕ್ಕೆ4) ಮತ್ತು ಸ್ಪಿನ್ನರ್‌ ನಥಾನ್‌ ಲಯನ್ (80ಕ್ಕೆ4) ಅವರು ಇಂಗ್ಲೆಂಡ್‌ ತಂಡ ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸದಂತೆ ತಡೆದರು. ಟೀ ವಿರಾಮದ ವೇಳೆಗೆ ಇಂಗ್ಲೆಂಡ್‌ ಎರಡನೇ ಸರದಿಯಲ್ಲಿ 271 ರನ್‌ಗಳಿಗೆ ಆಲೌಟ್‌ ಆಯಿತು. ಆಫ್‌ ಸ್ಪಿನ್ನರ್‌ ಲಯನ್‌ ಅವರು ಜೋ ರೂಟ್‌ (46) ಮತ್ತು ಹ್ಯಾರಿ ಬ್ರೂಕ್‌ (46) ಅವರ ವಿಕೆಟ್‌ಗಳನ್ನು ಪಡೆದರು. ಸ್ಪಿನ್ನರ್‌ ಲಯನ್‌ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಮುನ್ನುಗ್ಗಿದ ರೂಟ್‌ ಅವರನ್ನು ಅಲೆಕ್ಸ್ ಕ್ಯಾರಿ ಅವರು ಸ್ಟಂಪಿಂಗ್‌ ಮಾಡಿದರು. 240 ಟೆಸ್ಟ್‌ ಇನಿಂಗ್ಸ್‌ಗಳಲ್ಲಿ ಅವರು ಸ್ಟಂಪಿಂಗ್‌ ಆಗಿ ವಿಕೆಟ್‌ ತೆತ್ತಿದ್ದು ಇದೇ ಮೊದಲು. ಇಂಗ್ಲೆಂಡ್‌ನ ಕೊನೆಯ ಎರಡು ವಿಕೆಟ್‌ಗಳಿಂದ 44 ರನ್‌ ಸೇರಿಸಿದ್ದ ರಿಂದ ತಂಡ 250ರ ಮೊತ್ತ ದಾಟಿತು. ಎಜ್ಬಾಸ್ಟನ್‌ನಲ್ಲಿ ಇದುವರೆಗೆ ಕೇವಲ ಮೂರು ತಂಡಗಳು ನಾಲ್ಕನೇ ಇನಿಂಗ್ಸ್‌ನಲ್ಲಿ 200ಕ್ಕಿಂತ ಹೆಚ್ಚು ರನ್‌ ಮಾಡಿ ಜಯಗಳಿಸಿವೆ. ಕಳೆದ ವರ್ಷ ಭಾರತ ತಂಡದ ವಿರುದ್ಧ ಇಂಗ್ಲೆಂಡ್‌ 3 ವಿಕೆಟ್‌ಗೆ 378 ರನ್‌ ಗಳಿಸಿದ್ದು ಇವುಗಳಲ್ಲಿ ಅತ್ಯಧಿಕ ಚೇಸ್‌ ಎನಿಸಿದೆ. ಸಂಕ್ಷಿಪ್ತ ಸ್ಕೋರು: ಪ್ರಥಮ ಇನಿಂಗ್ಸ್‌: ಇಂಗ್ಲೆಂಡ್‌: 8ಕ್ಕೆ 393 ಡಿಕ್ಲೇರ್ಡ್‌, ಆಸ್ಟ್ರೇಲಿಯಾ: 386; ಎರಡನೇ ಇನಿಂಗ್ಸ್‌: ಇಂಗ್ಲೆಂಡ್‌: 66.2 ಓವರುಗಳಲ್ಲಿ 273 (ಜೋ ರೂಟ್‌ 46, ಹ್ಯಾರಿ ಬ್ರೂಕ್‌ 46, ಬೆನ್‌ ಸ್ಟೋಕ್ಸ್‌ 43, ಜಾನಿ ಬೇಸ್ಟೊ 20, ಒಲಿ ರಾಬಿನ್ಸನ್‌ 27; ಪ್ಯಾಟ್‌ ಕಮಿನ್ಸ್ 63ಕ್ಕೆ4, ಜೋಶ್‌ ಹ್ಯಾಜಲ್‌ವುಡ್‌ 48ಕ್ಕೆ1, ನಥಾನ್ ಲಯನ್‌ 80ಕ್ಕೆ4, ಸ್ಕಾಟ್‌ ಬೊಲಾಂಡ್ 61ಕ್ಕೆ1). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.