ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ: ಬದಲಿ ತಾಣ– ಪಿಸಿಬಿ ಮನವಿ ಸಾಧ್ಯತೆ ನವದೆಹಲಿ (ಪಿಟಿಐ): ಮುಂಬರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಅಫ್ಗಾನಿಸ್ತಾನ ವಿರುದ್ಧ ತನ್ನ ಪಂದ್ಯವನ್ನು ಚೆನ್ನೈನಲ್ಲಿ ಆಡುವುದಕ್ಕೆ ಹಿಂದೇಟು ಹಾಕಿದೆ ಎಂದು ಮೂಲಗಳು ತಿಳಿಸಿವೆ. ಅಂತೆಯೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಬೆಂಗಳೂರಿನಲ್ಲಿ ಆಡುವು ದಕ್ಕೂ ಅಸಮ್ಮತಿ ಸೂಚಿಸುವ ಸಾಧ್ಯತೆಯಿದೆ. ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯ ಕರಡು ವೇಳಾಪಟ್ಟಿಯನ್ನು ಬಿಸಿಸಿಐ ಈಗಾಗಲೇ ಸಿದ್ಧಪಡಿಸಿ ಐಸಿಸಿಗೆ ನೀಡಿದೆ. ಐಸಿಸಿಯು ಕರಡು ವೇಳಾಪಟ್ಟಿ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸೇರಿದಂತೆ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಎಲ್ಲ ದೇಶಗಳ ಕ್ರಿಕೆಟ್‌ ಮಂಡಳಿಗಳಿಗೆ ನೀಡಿದೆ. ಪಾಕ್‌ ಪಂದ್ಯಗಳಿಗೆ ನಿಗದಿಪಡಿಸಿದ ತಾಣಗಳಿಗೆ ಒಪ್ಪಿಗೆ ಸೂಚಿಸುವ ಕಾರ್ಯವನ್ನು ಪಿಸಿಬಿಯು ತಂಡದ ಯೋಜನೆ ರೂಪಿಸುವ ತಜ್ಞರು ಮತ್ತು ಆಯ್ಕೆ ಸಮಿತಿ ಸದಸ್ಯರಿಗೆ ಒಪ್ಪಿಸಿತ್ತು. ಪಾಕಿಸ್ತಾನದ ಪಂದ್ಯಗಳಿಗೆ ನಿಗದಿಪಡಿಸಿರುವ ಎರಡು ತಾಣಗಳ ಬಗ್ಗೆ ಅವರು ಅಸಮ್ಮತಿ ಸೂಚಿಸಿದ್ದಾರೆ ಎಂದು ಪಿಸಿಬಿ ಮೂಲಗಳು ಹೇಳಿವೆ. ‘ಚೆನ್ನೈ ಕ್ರೀಡಾಂಗಣದ ಪಿಚ್‌, ಸ್ಪಿನ್ನರ್‌ಗಳಿಗೆ ನೆರವು ನೀಡುತ್ತದೆ. ಅಫ್ಗಾನಿಸ್ತಾನ ತಂಡದಲ್ಲಿ ಪ್ರಮುಖ ಸ್ಪಿನ್ನರ್‌ಗಳಾದ ರಶೀದ್‌ ಖಾನ್‌ ಮತ್ತು ನೂರ್‌ ಅಹಮದ್‌ ಇರುವುದರಿಂದ ಪಾಕ್ ಬ್ಯಾಟರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು ಎಂಬ ಅಭಿಪ್ರಾಯವನ್ನು ಅವರು ಪಿಸಿಬಿಗೆ ನೀಡಿದ್ದಾರೆ’ ಎಂದು ತಿಳಿಸಿವೆ. ಆದರೆ, ಬ್ಯಾಟರ್‌ ಸ್ನೇಹಿ ಪಿಚ್‌ ಹೊಂದಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಪಾಕ್‌ ಏಕೆ ಹಿಂದೇಟು ಹಾಕುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ‘ಅಫ್ಗಾನಿಸ್ತಾನ ವಿರುದ್ಧದ ಪಂದ್ಯ ವನ್ನು ಬೆಂಗಳೂರಿನಲ್ಲೂ, ಆಸ್ಟ್ರೇಲಿಯಾ ಎದುರಿನ ಪಂದ್ಯವನ್ನು ಚೆನ್ನೈನಲ್ಲೂ ಆಯೋಜಿಸುವಂತೆ ಪಿಸಿಬಿಯು ಐಸಿಸಿ ಹಾಗೂ ಬಿಸಿಸಿಐಗೆ ಮನವಿ ಮಾಡುವ ಸಾಧ್ಯತೆಯಿದೆ’ ಎಂದು ಮೂಲಗಳು ತಿಳಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.