: ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ಗೆ 9 ವಿಕೆಟ್ ಜಯ ಅಹಮದಾಬಾದ್: ನ್ಯೂಜಿಲೆಂಡ್‌ ತಂಡದ ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಅವರ ಸ್ಪೋಟಕ ಶೈಲಿಯ ಬ್ಯಾಟಿಂಗ್ ಮುಂದೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಣಿಯಿತು. ಗುರುವಾರ ಆರಂಭವಾದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಜೊಸ್ ಬಟ್ಲರ್ ಬಳಗಕ್ಕೆ ಕಿವೀಸ್ ತಂಡವು 9 ವಿಕೆಟ್‌ಗಳಿಂದ ಗೆದ್ದಿತು. 2019ರ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಸೋತಿದ್ದ ನ್ಯೂಜಿಲೆಂಡ್ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಯ್ಯಿ ತೀರಿಸಿಕೊಂಡಿತು. ಟಾಸ್ ಗೆದ್ದ ಕಿವೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಜೋ ರೂಟ್ (77; 86ಎ, 4X4, 6X1) ಅವರ ಅರ್ಧಶತಕದ ಬಲದಿಂದ ಇಂಗ್ಲೆಂಡ್ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 282 ರನ್ ಗಳಿಸಿತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ 36.2 ಓವರ್‌ಗಳಲ್ಲಿ 1 ವಿಕೆಟ್‌ಗೆ 283 ರನ್‌ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕ ಬ್ಯಾಟರ್ ಕಾನ್ವೆ (ಅಜೇಯ 152) ಮತ್ತು ಯುವ ಆಟಗಾರ ರಚಿನ್ ರವೀಂದ್ರ (ಅಜೇಯ 123) ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 273 ರನ್ ಸೇರಿಸಿದರು. ಇಂಗ್ಲೆಂಡ್ ತಂಡದ ಕ್ರಿಸ್ ವೋಕ್ಸ್, ಸ್ಯಾಮ್ ಕರನ್ ಮತ್ತು ಮಾರ್ಕ್ ವುಡ್ ಅವರ ಸ್ವಿಂಗ್ ಅಸ್ತ್ರಗಳು ಈ ಜೋಡಿಯ ಮುಂದೆ ವಿಫಲವಾದವು. ಇಂಗ್ಲೆಂಡ್ ತಂಡವು ಇತ್ತೀಚಿನ ದಿನಗಳಲ್ಲಿ ಅನುಸರಿಸುತ್ತಿರುವ ‘ಬಜ್ ಬಾಲ್‌’ ತಂತ್ರವನ್ನು ಕಿವೀಸ್ ಕೂಡ ಇಲ್ಲಿ ಬಳಿಸಿತು. ಈ ಸೂತ್ರದ ಪ್ರಕಾರ ಆಕ್ರಮಣಶೈಲಿಯ ಬ್ಯಾಟಿಂಗ್ ಮೂಲಕ ಬೌಲರ್‌ಗಳನ್ನು ದೃತಿಗೆಡಿಸುವ ಕಾರ್ಯವನ್ನು ಇಬ್ಬರೂ ಬ್ಯಾಟರ್‌ಗಳು ಅಚ್ಚುಕಟ್ಟಾಗಿ ಮಾಡಿದರು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ವಿಲ್ ಯಂಗ್ ವಿಕೆಟ್ ಗಳಿಸಿದ ಇಂಗ್ಲೆಂಡ್ ಬೌಲರ್ ಸ್ಯಾಮ್ ಕರನ್ ಸಂಭ್ರಮಿಸಿದ್ದರು. ನಂತರದ ಅವಧಿಯಲ್ಲಿ ಅಂತಹ ಮತ್ತೊಂದು ಅವಕಾಶ ಯಾವುದೇ ಬೌಲರ್‌ಗೂ ಸಿಗಲಿಲ್ಲ. ಐಪಿಎಲ್‌ನಲ್ಲಿ ಮಿಂಚಿದ್ದ ಕಾನ್ವೆ 121 ಎಸೆತಗಳನ್ನು ಆಡಿದರು. ಅದರಲ್ಲಿ 19 ಬೌಂಡರಿ ಮತ್ತು 3 ಸಿಕ್ಸರ್ ಹೊಡೆದರು. ಇನ್ನೊಂದೆಡೆ 23 ವರ್ಷದ ರಚಿನ್ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಅವರ ವೃತ್ತಿಜೀವನದ 13ನೇ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿದೆ. ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವ ಭಾರತ ಮೂಲದ ಕುಟುಂಬದ ಎಡಗೈ ಆಲ್‌ರೌಂಡರ್ ರಚಿನ್ ಎದುರಾಳಿ ತಂಡದ ಅನುಭವಿಗಳ ಎದುರು ಭರ್ತಿ ಆತ್ಮವಿಶ್ವಾಸದಿಂದ ಅಡಿದರು. ಕವರ್ ಡ್ರೈವ್, ಫ್ಲಿಕ್ ಮತ್ತು ಕಟ್‌ಗಳ ಅಮೋಘ ಆಟವರದ್ದಾಗಿತ್ತು. ಅವರು ಒಂದು ಹಂತದಲ್ಲಿ ಕಾನ್ವೆಗಿಂತಲೂ ವೇಗವಾಗಿ ಅವರು ಬ್ಯಾಟ್ ಬೀಸಿದರು. 128.12ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ಕಿವೀಸ್ ತಂಡದಲ್ಲಿ ಅನುಭವಿ ನಾಯಕ ಕೇನ್ ವಿಲಿಯಮ್ಸನ್ ಮತ್ತು ಇಂಗ್ಲೆಂಡ್ ತಂಡದಲ್ಲಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಅಜೇಯ 273 ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಅವರು ಎರಡನೇ ವಿಕೆಟ್‌ಗೆ ಅಜೇಯ 273 ರನ್‌ ಸೇರಿಸಿ ಜೊತೆಯಾಟದ ದಾಖಲೆ ಬರೆದರು. ನ್ಯೂಜಿಲೆಂಡ್ ತಂಡದ ಪರವಾಗಿ ದಾಖಲಾದ ಶ್ರೇಷ್ಠ ಜೊತೆಯಾಟವಾಗಿದೆ. ಈ ಹಿಂದೆ ಮಾರ್ಟಿನ್ ಗಪ್ಟಿಲ್ ಮತ್ತು ವಿಲ್ ಯಂಗ್ ಅವರು 203 ರನ್‌ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಕಾನ್ವೆ ಮತ್ತು ರಚಿನ್ ಈ ಜತೆಯಾಟಕ್ಕಾಗಿ ಒಟ್ಟು 211 ಎಸೆತಗಳನ್ನು ಆಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.