ದುಲೀಪ್ ಟ್ರೋಫಿ: ಧ್ರುವ ಶೋರೆ ಶತಕ ವೈಭವ ಬೆಂಗಳೂರು: ಉದ್ಯಾನನಗರಿಯ ಮೇಲೆ ಬುಧವಾರ ಇಡೀ ದಿನ ಮಳೆ ಮೋಡಗಳ ಓಡಾಟವಿತ್ತು. ಆದರೆ, ಹನಿ ಉದುರಲಿಲ್ಲ. ಇತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತರ ವಲಯದ ಆಟಗಾರ ಧ್ರುವ ಶೋರೆ ರನ್‌ಗಳ ಮಳೆ ಸುರಿಸಿದರು. ಚೆಂದದ ಶತಕ ದಾಖಲಿಸಿದರು. ಇದರಿಂದಾಗಿ ಉತ್ತರ ವಲಯ ತಂಡವು ಈಶಾನ್ಯ ವಲಯದ ಎದುರು 87 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 306 ಗಳಿಸಿದೆ. ನಿಶಾಂತ್ ಸಿಂಧು (ಬ್ಯಾಟಿಂಗ್ 76) ಹಾಗೂ ಪುಳಕಿತ್ ನಾರಂಗ್ (ಬ್ಯಾಟಿಂಗ್ 23) ಕ್ರೀಸ್‌ನಲ್ಲಿದ್ದಾರೆ. ರಾಂಗ್‌ಸೆನ್ ಜೊನಾಥನ್ ನೇತೃತ್ವದ ಈಶಾನ್ಯ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತರ ವಲಯದ ಆರಂಭಿಕ ಬ್ಯಾಟರ್ ಧ್ರುವ ಶೋರೆ (135; 211ಎ, 4X22) ಮತ್ತು ಪ್ರಶಾಂತ್ ಚೋಪ್ರಾ (32; 68ಎ) ಅವರು ಉತ್ತಮ ಅಡಿಪಾಯ ಹಾಕಿದರು. ಮೊದಲ ವಿಕೆಟ್‌ಗೆ 80 ರನ್‌ ಸೇರಿಸಿದರು. ಊಟಕ್ಕೂ ಮುನ್ನ ಫೀರೊಜಿಯಾನ್ ಜೊತಿನ್ ಬೌಲಿಂಗ್‌ನಲ್ಲಿ ಪ್ರಶಾಂತ್ ಕ್ಲೀನ್‌ಬೌಲ್ಡ್ ಆದರು. ನಂತರದ ಎಸೆತದಲ್ಲಿಯೇ ಅಂಕಿತ್ ಖಲ್ಸಿ ಕೂಡ ಔಟಾದರು. ಈ ಹಂತದಲ್ಲಿ ಧ್ರುವ್ ಮತ್ತು ಪ್ರಭಸಿಮ್ರನ್ ಸಿಂಗ್ (31; 40ಎ) ಸೇರಿ ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 59 ರನ್‌ ಸೇರಿಸಿದರು. ಇದರಿಂದಾಗಿ ಮೊತ್ತವು ಏರತೊಡಗಿತು. ಆದರೆ, ಈ ಸಂದರ್ಭದಲ್ಲಿ ಈಶಾನ್ಯ ತಂಡದ ಲೆಮ್ತೂರ್ ಬೌಲಿಂಗ್‌ನಲ್ಲಿ ಪ್ರಭಸಿಮ್ರನ್ ಔಟಾದರು. ಇದರಿಂದಾಗಿ ಜೊತೆಯಾಟ ಮುರಿದುಬಿತ್ತು. ಅಂಕಿತ್ ಕುಮಾರ್ ಕೇವಲ 9 ರನ್ ಗಳಿಸಿ ನಿರ್ಗಮಿಸಿದರು. ಆದರೆ ಗಟ್ಟಿಯಾಗಿ ನಿಂತು ಆಡುತ್ತಿದ್ದ ಧ್ರುವ ಮಾತ್ರ ಎದೆಗುಂದಲಿಲ್ಲ. ಅವರಿಗೆ ಜೊತೆಗೂಡಿದ ನಿಶಾಂತ್ ಸಿಂಧು ಇನಿಂಗ್ಸ್‌ ಚಿತ್ರಣ ವನ್ನೇ ಬದಲಾಯಿಸಿ ಬಿಟ್ಟರು. ಚುರುಕಾಗಿ ರನ್‌ ಗಳಿಸಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 80 ರನ್‌ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು 200ರ ಗಡಿ ದಾಟಿತು. ಧ್ರುವ ಶತಕ ಪೂರೈಸಿದರು. 2022–23ರ ರಣಜಿ ಋತುವಿನಲ್ಲಿ ಅವರು ಮೂರು ಶತಕ ಬಾರಿಸಿದ್ದರು. ಏಳೂ ಪಂದ್ಯಗಳಲ್ಲಿ 859 ರನ್‌ ಸೇರಿಸಿದ್ದರು. ಇಲ್ಲಿಯೂ ಅದೇ ಲಯ ಮುಂದುವರಿಸಿದರು. 31 ವರ್ಷದ ಧ್ರುವ ಅವರು ಎದುರಾಳಿ ಬೌಲರ್‌ಗಳ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸಿದರು. ಎಡಗೈ ಸ್ಪಿನ್ನರ್ ಕಿಶನ್ ಸಿಂಘಾ ಅವರ ಎಸೆತದಲ್ಲಿ ಧ್ರುವ ಅವರು ಜೋನಾಥನ್‌ ಪಡೆದ ಕ್ಯಾಚ್‌ಗೆ ಔಟಾದರು. ನಾಯಕ ಜಯಂತ್ ಯಾದವ್ ಕೂಡ ಇದೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆಗಿನ್ನೂ ತಂಡವು 250ರ ಗಡಿ ಮುಟ್ಟಿರಲಿಲ್ಲ. ಆದರೆ ಕ್ರೀಸ್‌ನಲ್ಲಿದ್ದ ನಿಶಾಂತ್ ಅವರೊಂದಿಗೆ ಸೇರಿದ ನಾರಂಗ್ ತಂಡಕ್ಕೆ ಆಸರೆಯಾದರು. ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ 64 ರನ್‌ ಸೇರಿಸಿದರು. ಸಂಕ್ಷಿಪ್ತ ಸ್ಕೋರು: ಚಿನ್ನಸ್ವಾಮಿ ಕ್ರೀಡಾಂಗಣ: ಉತ್ತರ ವಲಯ: 87 ಓವರ್‌ಗಳಲ್ಲಿ 6ಕ್ಕೆ 306 (ಧ್ರುವ ಶೋರೆ 135, ಪ್ರಶಾಂತ್ ಚೋಪ್ರಾ 32, ಪ್ರಭಸಿಮ್ರನ್ ಸಿಂಗ್ 31, ನಿಶಾಂತ್ ಸಿಂಧು ಬ್ಯಾಟಿಂಗ್ 76, ಪುಳಕಿತ್ ನಾರಂಗ್ ಬ್ಯಾಟಿಂಗ್ 33, ಫ್ರಿರೊಜಿಯಾಮ್ ಜೊತಿನ್ 53ಕ್ಕೆ2, ಎಲ್. ಕೃಷ್ಣ ಸಿಂಗ್ 48ಕ್ಕೆ2)– ಈಶಾನ್ಯ ವಲಯದ ವಿರುದ್ಧದ ಪಂದ್ಯ. ಆಲೂರು ಮೈದಾನ: ಕೇಂದ್ರ ವಲಯ: 71.4 ಓವರ್‌ಗಳಲ್ಲಿ 182 (ವಿವೇಕ್ ಸಿಂಗ್ 21, ಹಿಮಾಂಶು ಮಂತ್ರಿ 29, ರಿಂಕು ಸಿಂಗ್ 38, ಉಪೇಂದ್ರ ಯಾದವ್ 25, ಮಣಿಶಂರ್ ಮುರಾಸಿಂಗ್ 42ಕ್ಕೆ5, ಶಾಬಾಜ್ ನದೀಂ 42ಕ್ಕೆ 2). ಪೂರ್ವ ವಲಯ: 12 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 32 (ಸುದೀಪ್ ಕುಮಾರ್ ಘರಮಿ ಬ್ಯಾಟಿಂಗ್ 19, ಶಾಬಾಜ್ ನದೀಂ ಬ್ಯಾಟಿಂಗ್ 6, ಆವೇಶ್ ಖಾನ್ 13ಕ್ಕೆ2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.