: ಭಾರತ ಕ್ರಿಕೆಟ್ ತಂಡ ಭಾಗವಹಿಸುವ ಕುರಿತು ಬಿಸಿಸಿಐ ಸಭೆಯಲ್ಲಿ ಚರ್ಚೆ‌ ನವದೆಹಲಿ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡಗಳ ಭಾಗವಹಿಸುವಿಕೆ, ತಂಡದ ಪ್ರಾಯೋಜಕತ್ವ ಮತ್ತು ಮಾಧ್ಯಮ ಹಕ್ಕುಗಳಂತಹ ಪ್ರಮುಖ ವಿಚಾರಗಳು ಜುಲೈ 7ರಂದು ನಡೆಯಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಚರ್ಚೆಯಾಗಲಿವೆ. ಮೂಲಗಳ ಪ್ರಕಾರ, ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ಪುರುಷ ಹಾಗೂ ಮಹಿಳೆಯರ ಕ್ರಿಕೆಟ್ ತಂಡಗಳ ಭಾಗವಹಿಸುವಿಕೆ ವಿಚಾರವು ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ. ರಾಷ್ಟ್ರೀಯ ತಂಡಗಳ ಪ್ರಾಯೋಜಕತ್ವದ ವಿಚಾರ ಹಾಗೂ ಸಯ್ಯದ್‌ ಮುಷ್ತಾಕ್‌ ಅಲಿ ಟಿ–20 ಟೂರ್ನಿಗೆ ಸಂಬಂಧಿಸಿದಂತೆ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ಕುರಿತಾಗಿಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಬಿಸಿಸಿಐ, ಭಾರತ ಕ್ರಿಕೆಟ್‌ ತಂಡದ ಪ್ರಾಯೋಜಕತ್ವದ ಒಪ್ಪಂದಕ್ಕೆ ಈ ತಿಂಗಳ ಆರಂಭದಲ್ಲಿ ಆಹ್ವಾನ ನೀಡಿತ್ತು. ಆನ್‌ಲೈನ್‌ ಶಿಕ್ಷಣ ಮತ್ತು ಕಲಿಕಾ ಆ್ಯಪ್‌ ಆಗಿರುವ ಬೆಂಗಳೂರು ಮೂಲದ ಬೈಜುಸ್‌ ಹೊಂದಿದ್ದ ಪ್ರಾಯೋಜಕತ್ವವು ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಮುಗಿದಿತ್ತು. ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟವು ಚೀನಾದ ಹಾಂಗ್‌ಡೋ ನಗರದಲ್ಲಿ ಸೆಪ್ಟೆಂಬರ್‌ 23 ರಿಂದ ಅಕ್ಟೋಬರ್‌ 8ರ ವರೆಗೆ ನಡೆಯಲಿದೆ. ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ‘ಇಂಪ್ಯಾಕ್ಟ್‌ ಪ್ಲೇಯರ್‌’ ನಿಯಮದ ಪ್ರಕಾರ ತಂಡಗಳು ಅಂತಿಮ ಇಲೆವೆನ್‌ ಜತೆಗೆ, ಐವರು ಬದಲಿ ಆಟಗಾರರನ್ನೂ ಹೆಸರಿಸಬೇಕು. ಅದರಲ್ಲಿ ಒಬ್ಬ ಆಟಗಾರ (ಇಂಪ್ಯಾಕ್ಟ್ ಪ್ಲೇಯರ್‌) ಪಂದ್ಯದ ಯಾವುದೇ ಹಂತದಲ್ಲಿ ಆರಂಭಿಕ ಇಲೆವೆನ್‌ನ ಆಟಗಾರರನ್ನು ಬದಲಾಯಿಸಿ ಕಣಕ್ಕಿಳಿಯಬಹುದು. ಇನಿಂಗ್ಸ್‌ನ 14ನೇ ಓವರ್‌ನ ಮುಕ್ತಾಯಕ್ಕೆ ಮುನ್ನ ಈ ಬದಲಾವಣೆ ಮಾಡಬೇಕು. ಬ್ಯಾಟ್‌ ಮಾಡುವ ತಂಡವು ಔಟಾದ ಅಥವಾ ನಿವೃತ್ತಿಗೊಂಡು ಪೆವಿಲಿಯನ್‌ಗೆ ಮರಳಿದ ಬ್ಯಾಟರ್‌ಗೆ ಬದಲಿಯಾಗಿ ಇಂಪ್ಯಾಕ್ಟ್‌ ಪ್ಲೇಯರ್‌ ಅನ್ನು ಕಣಕ್ಕಿಳಿಸಿದರೂ 11 ಆಟಗಾರರಿಗಷ್ಟೇ ಬ್ಯಾಟ್‌ ಮಾಡಲು ಅವಕಾಶವಿದೆ.‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.