ಆ್ಯಷಸ್: ಬೆನ್ ಅಮೊಘ ಬ್ಯಾಟಿಂಗ್; ಇಂಗ್ಲೆಂಡ್ ದಿಟ್ಟ ಉತ್ತರ ಲಂಡನ್: ಸ್ಟೀವನ್ ಸ್ಮಿತ್ ಗಳಿಸಿದ ಸುಂದರ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ಇಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸಿತು. ಇಂಗ್ಲೆಂಡ್ ಕೂಡ ದಿಟ್ಟ ಪ್ರತಿಕ್ರಿಯೆ ನೀಡಿದೆ. ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ದಿನದಾಟದಲ್ಲಿ ಸ್ಮಿತ್ (110; 184ಎ, 4X15) ಮತ್ತು ಟ್ರಾವಿಸ್ ಹೆಡ್ (77; 73ಎ( ಅವರ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು 416 ರನ್ ಗಳಿಸಿತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡವು 46 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 226 ರನ್ ಗಳಿಸಿತು. ಸ್ಮಿತ್ ಅವರಿಗೆ ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ 32ನೇ ಶತಕವಾಗಿದೆ. ಇದರೊಂದಿಗೆ ಅವರು ಈ ಮಾದರಿಯಲ್ಲಿ ಒಂಬತ್ತು ಸಾವಿರ ರನ್‌ಗಳಿಸಿದ ಸಾಧನೆಯನ್ನೂ ಮಾಡಿದರು. ಆರಂಭಿಕ ಜೋಡಿ ಜಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 91 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಆದರೆ ಆಸ್ಟ್ರೇಲಿಯಾ ಸ್ಪಿನ್ನರ್ ನೇಥನ್ ಲಯನ್ ಬೌಲಿಂಗ್‌ನಲ್ಲಿ ಜಾಕ್‌ ಕ್ರಾಲಿ ವಿಕೆಟ್ ಉರುಳಿತು. ವಿಕೆಟ್‌ಕೀಪರ್ ಅಲೆಕ್ಸ್ ಮಾಡಿದ ಮಿಂಚಿನ ವೇಗದ ಸ್ಟಂಪಿಂಗ್‌ನಲ್ಲಿ ಕ್ರಾಲಿ ಔಟಾದರು. ಬೆನ್ ಜೊತೆಗೂಡಿದ ಒಲಿ ಪೋಪ್ ಅವರು ರನ್‌ಗಳಿಕೆಗೆ ವೇಗ ನೀಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ 97 ರನ್‌ ಸೇರಿಸಿದರು. ಬೆನ್ ಶತಕದತ್ತ ದಾಪುಗಾಲಿಟ್ಟರು. ಆದರೆ ಅವ ಆಸೆಗೆ ಜೋಶ್ ಹ್ಯಾಜಲ್‌ವುಡ್ ಅಡ್ಡಗಾಲು ಹಾಕಿದರು. 98 ರನ್‌ ಗಳಿಸಿದ್ದ ಬೆನ್ ವಿಕೆಟ್ ಪಡೆದ ಜೋಶ್ ಸಂಭ್ರಮಿಸಿದರು. ಕ್ಯಾಮರಾನ್ ಗ್ರೀನ್ ಬೌಲಿಂಗ್‌ನಲ್ಲಿ ಪೋಪ್ (42 ರನ್) ಕೂಡ ಔಟಾದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ರೂಟ್ ಕೇವಲ 10 ರನ್‌ ಗಳಿಸಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 100.4 ಓವರ್‌ಗಳಲ್ಲಿ 416 (ಸ್ಟೀವನ್ ಸ್ಮಿತ್ 110, ಟ್ರಾವಿಸ್ ಹೆಡ್ 77, ಅಲೆಕ್ಸ್ ಕ್ಯಾರಿ 22, ಪ್ಯಾಟ್ ಕಮಿನ್ಸ್ ಔಟಾಗದೆ 22, ಒಲಿ ರಾಬಿನ್ಸನ್ 100ಕ್ಕೆ3, ಜೋಶ್ ಟಂಗ್ 98ಕ್ಕೆ3, ಜೋ ರೂಟ್ 19ಕ್ಕೆ2) ಇಂಗ್ಲೆಂಡ್: 46 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 226 (ಜ್ಯಾಕ್ ಕ್ರಾಲಿ 48, ಬೆನ್ ಡಕೆಟ್ 98, ಒಲಿ ಪೋಪ್ 42, ಹ್ಯಾರಿ ಬ್ರೂಕ್ ಬ್ಯಾಟಿಂಗ್ 11, ಬೆನ್ ಸ್ಟೋಕ್ಸ್ ಬ್ಯಾಟಿಂಗ್ 1, ಮಿಚೆಲ್ ಸ್ಟಾರ್ಕ್ 72ಕ್ಕೆ1, ಜೋಶ್ ಹ್ಯಾಜಲ್‌ವುಡ್ 52ಕ್ಕೆ1, ನೇಥನ್ ಲಯನ್ 35ಕ್ಕೆ1) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.