ಬೌಲಿಂಗ್ ಮೂಲಕ ಗಮನ ಸೆಳೆದ ಮಣಿಪುರದ ಇಬ್ಬರು ಪ್ರತಿಭಾನ್ವಿತ ಹುಡುಗರು ಬೆಂಗಳೂರು: ಹಿಂಸಾಚಾರದ ದಳ್ಳುರಿಯಲ್ಲಿ ಬೇಯುತ್ತಿರುವ ಮಣಿಪುರದ ಇಬ್ಬರು ಹುಡುಗರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಬೌಲಿಂಗ್ ಮೂಲಕ ಗಮನ ಸೆಳೆದರು. 26 ವರ್ಷದ ಎಡಗೈ ಸ್ಪಿನ್ನರ್ ಕಿಶನ್ ಸಿಂಗಾ ಮತ್ತು 17 ವರ್ಷದ ಫಿರೊಯ್‌ಜಾಮ್ ಜೊತಿನ್ ಸಿಂಗ್ ಅವರೇ ಆ ಕ್ರಿಕೆಟಿಗರು. ದುಲೀಪ್ ಟ್ರೋಫಿ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರ ವಲಯದ ಎದುರು ಆಡುತ್ತಿರುವ ಈಶಾನ್ಯ ವಲಯದ ತಂಡದಲ್ಲಿ ಇವರಿಬ್ಬರೂ ಇದ್ದಾರೆ. ತಲಾ ಎರಡು ವಿಕೆಟ್‌ ಪಡೆದರು. ಪಂದ್ಯದ ನಂತರ ಸುದ್ದಿಗೋಷ್ಠಿಗೆ ಬಂದಿದ್ದ ಕಿಶನ್ ಸಿಂಗ್ ತಮ್ಮ ರಾಜ್ಯದ ಸದ್ಯದ ಸ್ಥಿತಿಗತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ‘ಸ್ಥಿತಿ ಚಿಂತಾಜನಕವಾಗಿದೆ‘ ಎಂದು ಪುನುರುಚ್ಚರಿಸುತ್ತಲೇ ಇದ್ದರು. ‘ಅಲ್ಲಿ ಅಭ್ಯಾಸ ನಡೆಸುವುದು ಬಹಳ ಕಷ್ಟವಾಗಿತ್ತು. ನಾವೇನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇಡೀ ರಾಜ್ಯವೇ ಕಷ್ಟದಲ್ಲಿ ಬೇಯುತ್ತಿದೆ. ಆದರೂ ನಮ್ಮ ಆಟದ ಮೇಲೆ ಏಕಾಗ್ರತೆ ಸಾಧಿಸಿದವು. ನಮ್ಮ ಪಾಲಕರು ಅಪಾರ ಪ್ರೋತ್ಸಾಹ ನೀಡಿದರು. ಅಲ್ಲಿರುವ ನಮ್ಮವರ ಬಗ್ಗೆ ನಮಗೆ ಚಿಂತೆ ಇದೆ. ಈಗಲೂ ಅಲ್ಲಿಯ ಸ್ಥಿತಿ ಗಂಭೀರವಾಗಿದೆ‘ ಎಂದು ಕಿಶನ್ ವಿವರಿಸಿದರು. ‘ಮಣಿಪುರದಲ್ಲಿರುವ ತ್ವೇಷಮಯ ಪರಿಸ್ಥಿತಿಯಿಂದಾಗಿ ನಮಗೆ ಸುಮಾರು ಮೂರು ತಿಂಗಳಿನಿಂದ ಕ್ರಿಕೆಟ್ ಆಡಲು ಸಾಧ್ಯವಾಗಿಲ್ಲ. ಕರ್ಫ್ಯೂ ಜಾರಿಯಾಗಿತ್ತು. ಮನೆಯೊಳಗೆ ಉಳಿದೆವು. ಜನವರಿಯಲ್ಲಿ ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದ್ದೆವು. ನಂತರ ಲೀಗ್ ಪಂದ್ಯಗಳು ಒಂದು ತಿಂಗಳಷ್ಟೇ ನಡೆದ ನಂತರ ಈಗಲೇ ಕ್ರಿಕೆಟ್ ಆಡುತ್ತಿರುವುದು’ ಎಂದು ಕಿಶನ್ ಹೇಳಿದರು. ‘ನಮ್ಮ ಈಶಾನ್ಯ ರಾಜ್ಯ ತಂಡಗಳಲ್ಲಿ ಈಗ ಸ್ಥಳೀಯರಿಗೆ ಹೆಚ್ಚು ಅವಕಾಶ ಸಿಗುತ್ತಿದೆ. ಏಕೆಂದರೆ ಮೊದಲಿನಂತೆ ಹೊರರಾಜ್ಯದ ಆಟಗಾರರು ಬಂದು ಆಡುತ್ತಿಲ್ಲ. ಈ ಮೊದಲು ಅವರು ಟೂರ್ನಿ ಇದ್ದಾಗ ಬಂದು ಆಡಿ ಮರಳಿ ಹೋಗುತ್ತಿದ್ದರು. ಆದ್ದರಿಂದ ನಮಗೂ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೂ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತೋರಲು ಆಗುತ್ತಿರಲಿಲ್ಲ. ಈಗ ಅವರಿಲ್ಲದ ಕಾರಣ ನಮ್ಮವರಿಗೇ ಹೆಚ್ಚು ನೆರವು ಒದಗಿದೆ‘ ಎಂದು ಕಿಶನ್ ಹೇಳಿದರು. ಈ ಸಂದರ್ಭದಲ್ಲಿ ಹಾಜರಿದ್ದ ಜೋತಿನ್ ಸಿಂಗ್ ಮೌನ ಮುರಿದರು. ತುಸು ಹಿಂಜರಿಯುತ್ತಲೇ ಪ್ರಶ್ನೆಯೊಂದಕ್ಕೆ ಚುಟುಕಾಗಿ ಉತ್ತರಿಸಿದರು. ‘ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ನನ್ನ ತಂದೆಯ ಕ್ರಿಕೆಟ್ ಅಕಾಡೆಮಿ ಇದೆ. ಆದ್ದರಿಂದ ಅಲ್ಲಿ ಒಂದಿಷ್ಟು ಅಭ್ಯಾಸ ಮಾಡಿದೆ. ಆದರೆ ಅದೂ ಸವಾಲಿನದ್ದಾಗಿತ್ತು‘ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.