ಐಸಿಸಿ ವಿಶ್ವಕಪ್‌ ಟೂರ್ನಿ: ಪಾಕಿಸ್ತಾನದಿಂದ ಭಾರತಕ್ಕೆ ಭದ್ರತಾ ನಿಯೋಗಕ್ಕೆ ಸಿದ್ಧತೆ ಕರಾಚಿ: ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಕಳುಹಿಸಲು ಅನುಮತಿ ನೀಡುವುದಕ್ಕೂ ಮುನ್ನ, ಪಂದ್ಯಗಳು ನಡೆಯುವ ಸ್ಥಳಗಳ ಪರಿಶೀಲನೆಗಾಗಿ ಭದ್ರತಾ ನಿಯೋಗ ರವಾನಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ. ಈದ್ ರಜೆ ಮುಗಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ನೂತನ ಅಧ್ಯಕ್ಷರ ನೇಮಕ ನಡೆಯಲಿದೆ. ಅವರು ಅಧಿಕಾರ ವಹಿಸಿಕೊಂಡ ನಂತರ ಭದ್ರತಾ ನಿಯೋಗವನ್ನು ಭಾರತಕ್ಕೆ ಕಳುಹಿಸುವ ದಿನವನ್ನು ವಿದೇಶಾಂಗ ಮತ್ತು ಆಂತರಿಕ ಸಚಿವಾಲಯ ಸೇರಿದಂತೆ ಸರ್ಕಾರ ನಿರ್ಧರಿಸುತ್ತದೆ ಎಂದು ಅಂತರ ಪ್ರಾಂತೀಯ ಸಮನ್ವಯ (ಕ್ರೀಡಾ) ಸಚಿವಾಲಯದ ಮೂಲಗಳು ತಿಳಿಸಿವೆ. ‘ಪಾಕ್‌ ತಂಡವು ಟೂರ್ನಿಯಲ್ಲಿ ಆಡುವ ಸ್ಥಳಗಳು, ನಮ್ಮ ಆಟಗಾರರಿಗೆ ನೀಡುವ ಭದ್ರತೆ ಮತ್ತು ಇತರ ವ್ಯವಸ್ಥೆಗಳನ್ನು ಪರಿಶೀಲಿಸಲು ಭದ್ರತಾ ನಿಯೋಗವು ಪಿಸಿಬಿಯ ಪ್ರಾತಿನಿಧ್ಯದೊಂದಿಗೆ ತೆರಳಲಿದೆ’ ಎಂದು ಸಚಿವಾಲಯ ಹೇಳಿದೆ. ‘ಅ.15ರಂದು ಭಾರತ ಮತ್ತು ಪಾಕ್‌ ನಡುವಿನ ‌ಪಂದ್ಯದ ಆತಿಥ್ಯ ವಹಿಸಲಿರುವ ಅಹಮದಾಬಾದ್‌ ಹಾಗೂ ಇತರ ಪಂದ್ಯಗಳು ನಡೆಯಲಿರುವ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ನಗರಗಳಿಗೆ ನಿಯೋಗ ಭೇಟಿ ನೀಡಲಿದೆ. ಪಂದ್ಯಗಳಿಗೆ ಈಗಾಗಲೇ ನಿಗದಿಪಡಿಸಿದ ಸ್ಥಳವನ್ನು ಬದಲಿಸುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ನಿಯೋಗ ಬಂದರೆ ಅದನ್ನು ವರದಿಯಲ್ಲಿ ಉಲ್ಲೇಖಿಸಲಿದೆ. ಪಿಸಿಬಿಯು ಐಸಿಸಿ ಮತ್ತು ಬಿಸಿಸಿಐಯೊಂದಿಗೆ ಆ ವರದಿಯನ್ನು ಹಂಚಿಕೊಳ್ಳಲಿದೆ’ ಎಂದು ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.