ವಿಶ್ವಕಪ್‌ಗೆ ಅರ್ಹತೆ ಪಡೆದ ಶ್ರೀಲಂಕಾ ಹರಾರೆ: ಪಥುಮ್‌ ನಿಸ್ಸಾಂಕ ಅವರ ಅಜೇಯ ಶತಕದ (101*, 102 ಎಸೆತ) ನೆರವಿನಿಂದ ಶ್ರೀಲಂಕಾ ತಂಡ ಭಾನುವಾರ ನಡೆದ ವಿಶ್ವಕಪ್‌ ಅರ್ಹತಾ ಟೂರ್ನಿಯ ಸೂಪರ್‌ ಸಿಕ್ಸ್ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆಯನ್ನೂ ಸಂಪಾದಿಸಿತು. ಶ್ರೀಲಂಕಾ ಈ ಮೂಲಕ ಸೂಪರ್‌ಸಿಕ್ಸ್‌ ಹಂತದಲ್ಲಿ ಎಂಟು ಪಾಯಿಂಟ್ಸ್‌ ಕಲೆಹಾಕಿದ್ದು, ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆಯುವುದು ಖಚಿತವಾಯಿತು. ಅರ್ಹತಾ ಟೂರ್ನಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು, ಅಕ್ಟೋಬರ್‌ 5 ರಿಂದ ನವೆಂಬರ್‌ 19ರವರೆಗೆ ನಡೆಯುವ ವಿಶ್ವಕಪ್‌ನಲ್ಲಿ ಆಡಲಿವೆ. ಜಿಂಬಾಬ್ವೆ ಬಳಿ ಆರು ಪಾಯಿಂಟ್ಸ್‌ ಇದ್ದು ಅದರ ಅವಕಾಶವೂ ಜೀವಂತವಾಗಿದೆ. ಆದರೆ ಆತಿಥೇಯ ತಂಡ ಮಂಗಳವಾರ ನಡೆಯುವ ತನ್ನ ಅಂತಿಮ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ತಂಡದ ಮೇಲೆ ಗೆಲ್ಲಲೇಬೇಕಿದೆ. ಟಾಸ್‌ ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡ ಶ್ರಿಲಂಕಾ, ಜಿಂಬಾಬ್ವೆ ತಂಡವನ್ನು 32.2 ಓವರುಗಳಲ್ಲಿ 165 ರನ್‌ಗಳಿಗೆ ಆಲೌಟ್‌ಮಾಡಿತು. ಆಫ್‌ ಸ್ಪಿನ್ನರ್ ಮಹೀಷ್ ತೀಕ್ಷಣ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿ 25 ರನ್ನಿಗೆ 4 ವಿಕೆಟ್‌ ಪಡೆದರೆ, ಎಡಗೈ ವೇಗದ ಬೌಲರ್‌ ದಿಲ್ಷನ್‌ ಮಧುಶಂಕ 15 ರನ್ನಿಗೆ 3 ವಿಕೆಟ್‌ ಗಳಿಸಿದರು. ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ಆರಾಮವಾಗಿ ಆಡಿ ಇನ್ನೂ 101 ಎಸೆತಗಳಿರುವಂತೆ ಗುರಿ ತಲುಪಿತು. ಏಕದಿನ ಪಂದ್ಯಗಳಲ್ಲಿ ಎರಡನೇ ಶತಕ ದಾಖಲಿಸಿದ ನಿಸ್ಸಾಂಕ 14 ಬೌಂಡರಿಗಳನ್ನು ಹೊಡೆದರು. ದಿಮುತ್‌ ಕರುಣಾರತ್ನೆ (30) ಜೊತೆ ಮೊದಲ ವಿಕೆಟ್‌ಗೆ 103 ರನ್‌ ಸೇರಿಸಿದರು. ಶ್ರೀಲಂಕಾ ಪ್ರತಿ ವಿಶ್ವಕಪ್‌ನಲ್ಲಿ ಆಡುತ್ತ ಬಂದಿದೆ. 1996ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿ ಚಾಂಪಿಯನ್ ಆಗಿತ್ತು. ಸ್ಕೋರುಗಳು: ಜಿಂಬಾಬ್ವೆ: 32.2 ಓವರುಗಳಲ್ಲಿ 165 (ಸೀನ್‌ ವಿಲಿಯಮ್ಸ್‌ 56, ಸಿಕಂದರ್ ರಝಾ 31; ದಿಲ್ಶನ್‌ ಮಧುಶಂಕ 15ಕ್ಕೆ3, ಮಹೀಷ ತೀಕ್ಷಣ 25ಕ್ಕೆ4); ಶ್ರೀಲಂಕಾ: 33.1 ಓವರುಗಳಲ್ಲಿ 1 ವಿಕೆಟ್‌ಗೆ 169 (ಪಥುಮ್‌ ನಿಸ್ಸಾಂಕ ಔಟಾಗದೇ 101, ದಿಮುತ್‌ ಕರುಣಾರತ್ನೆ 30, ಕುಸಲ್‌ ಮೆಂಡಿಸ್‌ ಔಟಾಗದೇ 25) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.