ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯಲನ್‌ ಬಾರ್ಡರ್‌ಗೆ ಪಾರ್ಕಿನ್ಸನ್‌ ಕಾಯಿಲೆ ಪ್ಯಾರಿಸ್‌: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆ್ಯಲನ್‌ ಬಾರ್ಡರ್‌ ಅವರು ತಮಗೆ ಪಾರ್ಕಿನ್ಸನ್‌ ಕಾಯಿಲೆ ಇದೆ ಎಂದು ಶುಕ್ರವಾರ ಬಹಿರಂಗಪಡಿಸಿದ್ದಾರೆ. ಏಳು ವರ್ಷಗಳ ಹಿಂದೆ ಆರೋಗ್ಯ ತಪಾಸಣೆ ವೇಳೆ ಕಾಯಿಲೆಯಿರುವುದು ಪತ್ತೆಯಾಗಿತ್ತು ಎಂದು 68 ವರ್ಷದ ಬಾರ್ಡರ್‌ ಮೊದಲ ಬಾರಿ ಸಾರ್ವಜನಿಕವಾಗಿ ಹೇಳಿದ್ದಾರೆ. 80 ವರ್ಷ ದಾಟಿದರೆ ಅದೊಂದು ಪವಾಡ ಎಂದು ತಮ್ಮ ಮತ್ತು ವೈದ್ಯ ಸ್ನೇಹಿತರ ಏಕಾಭಿಪ್ರಾಯವಾಗಿದೆ ಎಂದು ವಿಶ್ವ ಕ್ರಿಕೆಟ್‌ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾಗಿರುವ ಈ ಆಟಗಾರ ಹೇಳಿದ್ದಾರೆ. ‘ನಾನು ಇನ್ನೊಂದು ಶತಕ ಬಾರಿಸುವ ಸಾಧ್ಯತೆಯೇ ಇಲ್ಲ’ ಎಂದು ಬಾರ್ಡರ್‌ ‘ನ್ಯೂಸ್‌ಕಾರ್ಪ್‌’ಗೆ ತಿಳಿಸಿದ್ದಾರೆ. ತಮಗಿರುವ ಕಾಯಿಲೆಯ ಬಗ್ಗೆ ಬಾರ್ಡರ್‌ ಅವರು ಒಬ್ಬರಿಗಷ್ಟೇ ಮಾಹಿತಿ ಕೊಟ್ಟಿದ್ದರು. ಅದು ತಂಡದಲ್ಲಿ ಹಿಂದೆ ತಮ್ಮ ಜೊತೆ ಆಡಿದ್ದ ಡೀನ್‌ ಮೆರ್ವಿನ್‌ ಜೋನ್ಸ್‌ ಅವರಿಗೆ. ಜೋನ್ಸ್‌ 2020ರ ಸೆಪ್ಟೆಂಬರ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ನಂತರ ಕೆಲವು ಪ್ರಮುಖ ಮಾಜಿ ಆಟಗಾರರನ್ನು ಆಸ್ಟ್ರೇಲಿಯಾ ಕಳೆದುಕೊಂಡಿತು. ಮಾಜಿ ವಿಕೆಟ್‌ ಕೀಪರ್‌ ರಾಡ್‌ ಮಾರ್ಷ್ ಮತ್ತು ಸ್ಪಿನ್‌ ಮಾಂತ್ರಿಕ ಶೇನ್‌ ವಾರ್ನ್ ಅವರು 2022ರ ಮಾರ್ಚ್‌ನಲ್ಲಿ ಕೆಲವೇ ದಿನಗಳ ಅಂತರದಲ್ಲಿ ಅಸುನೀಗಿದ್ದರು. ಎರಡು ತಿಂಗಳ ನಂತರ ಆ್ಯಂಡ್ರೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ‘ಏಳು ವರ್ಷ ಈ ಸುದ್ದಿಯನ್ನು ತಮ್ಮಲ್ಲೇ ಇಟ್ಟಿದ್ದರಿಂದ ನೆಮ್ಮದಿಯಿಂದ ಇದ್ದೆ. ಆದರೆ ತಮ್ಮ ಹಲವು ನಿಕಟವರ್ತಿಗಳು ತಾವು ಸಣ್ಣಗೆ ಅದುರುತ್ತಿರುವುದನ್ನು ಗಮನಿಸುತ್ತಿದ್ದರು ಎಂದು ಸ್ನೇಹಿತರೊಬ್ಬರು ತಮಗೆ ತಿಳಿಸಿದರು’ ಎಂದು ಬಾರ್ಡರ್‌ ವಿವರಿಸಿದರು. ಬಾರ್ಡರ್‌, 1987ರಲ್ಲಿ ವಿಶ್ವ ಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದಾರೆ. 156 ಟೆಸ್ಟ್‌ಗಳಲ್ಲಿ 27 ಶತಕಗಳು, 63 ಅರ್ಧ ಶತಕಗಳನ್ನು ಅವರು ಬಾರಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.